

ಗದಗ: ಕೋವಿಡ್-19 ಸೋಂಕು ನಿಯಂತ್ರಣ ಕುರಿತಂತೆ ದತ್ತಾಂಶ ಸಂಗ್ರಹಣೆಗೆ ಕೇಂದ್ರ, ರಾಜ್ಯ ಸರ್ಕಾರಗಳು ವಿವಿಧ ಆಪ್ಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕ್ರೋಡೀಕರಿಸಿದ ದತ್ತಾಂಶಗಳನ್ನು ಸುಲಭವಾಗಿ ಅಪ್ಲೋಡ್ ಮಾಡಲು ಅನುಕೂಲವಾಗುವಂತೆ ಸಂಗ್ರಹದಲ್ಲಿಡಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಸರ್ವ ಶಿಕ್ಷಣ ಅಭಿಯಾನ ಯೋಜನಾ ನಿರ್ದೇಶಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕುರಿತು ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಹೊರಗಿನಿಂದ ಬರುವ ವಲಸೆ ಕಾರ್ವಿುಕರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡುವಂತೆ ಗ್ರಾಪಂ ಟಾಸ್ಕ್ಫೋರ್ಸ್ ಸಮಿತಿ ಕ್ರಮ ಜರುಗಿಸಬೇಕು. ಹೊರ ಜಿಲ್ಲೆಗಳ ಕಾರ್ವಿುಕರಿಗೆ ಊಟ, ದಿನಸಿ ನೀಡುವ ಕುರಿತು ಕ್ರಮ ವಹಿಸಬೇಕು. ಎಲ್ಲ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳ ವ್ಯಾಪ್ತಿಯಲ್ಲಿ ಜನರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಕಬೇಕು. ಧರಿಸದಿದ್ದವರಿಗೆ ಸರ್ಕಾರ ನಿಗದಿಪಡಿಸಿದ ದಂಡ ವಿಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಜಿಲ್ಲೆಯ 122 ಗ್ರಾಪಂಗಳ ವ್ಯಾಪ್ತಿಯಲ್ಲಿ ಇದುವರೆಗೆ 1.3 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಪಾವತಿಯಾಗುತ್ತಿದೆ. ಗ್ರಾಮ ವ್ಯಾಪ್ತಿಗಳಲ್ಲಿ ಕೋವಿಡ್-19 ಕುರಿತು ಜನ ಜಾಗೃತಿ ಮೂಡಿಸಲು ಟಾಸ್ಕ್ಫೋರ್ಸ್ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಪೀಡಿತ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದವರನ್ನು ಪತ್ತೆ ಹಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಮೇ 10ರವರೆಗೆ 2468 ಜನರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದೆ. ಆ ಪೈಕಿ 2093 ನಕಾರಾತ್ಮಕ ಪ್ರಕರಣಗಳಿವೆ. 5 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಪೈಕಿ ಮೊದಲ ಪಿ-166 ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳಿದ ನಾಲ್ವರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯ 5 ಪ್ರಕರಣಗಳ ಪ್ರಾಥಮಿಕ, ದ್ವಿತೀಯ ಹಂತದ 987 ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಕೇಂದ್ರ, ರಾಜ್ಯ ಸರ್ಕಾರದ ನಿರ್ದೇಶದನಂತೆ ಕಂಟೇನ್ಮೆಂಟ್ ಪ್ರದೇಶ ಹೊರತುಪಡಿಸಿ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ. ಪರಸ್ಪರ ಅಂತರ, ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರ ತಪಾಸಣೆಗಾಗಿ ಗದಗ ಹೊಸ ಬಸ್ ನಿಲ್ದಾಣವನ್ನು ಪ್ರವೇಶ ಕೇಂದ್ರವನ್ನಾಗಿಸಲಾಗಿದೆ. ಅವರ ಆರೋಗ್ಯ ಚಿಕಿತ್ಸೆ, ಎಲ್ಲ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರಿಗಿಡದ ಮಾತನಾಡಿ ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರೆಡ್ಡಿ, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.