

ಚಿಕ್ಕಮಗಳೂರು: ಡಿ. ೧೨ರಿಂದ ೧೪ರವರೆಗೆ ನಡೆಯುವ ದತ್ತ ಜಯಂತಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ದತ್ತ ಜಯಂತಿ ಕಾರ್ಯಕ್ರಮದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಮತ್ತು ನ್ಯಾಯಾಲಯದ ನಿರ್ದೇಶನದಂತೆ ವ್ಯವಸ್ಥಾಪನ ಸಮಿತಿ ಮೂಲಕ ಮೂರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ದತ್ತ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಬAಧಪಟ್ಟ ಇಲಾಖಾ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದ್ದು, ರಸ್ತೆ, ಕುಡಿಯುವ ನೀರು, ಪಾರ್ಕಿಂಗ್, ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಆಳವಡಿಸುವಂತೆ, ಆರೋಗ್ಯ ಸೇವೆ ಮತ್ತು ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ ಅವರು ಕಾರ್ಯಕ್ರಮ ಶಾಂತಿ ಮತ್ತು ವ್ಯವಸ್ಥಿತವಾಗಿ ನಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವ್ಯವಸ್ಥಾಪನ ಸಮಿತಿಯು ಪೂಜಾ ವಿಧಿ ವಿಧಾನಗಳನ್ನು ಮಾಡಲು ಎಲ್ಲ ರೀತಿಯ ಸಹಕಾರವನ್ನು ನೀಡಲಾಗಿದ್ದು, ಬರುವ ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯ ಸೇರಿದಂತೆ ಡಿ. ೧೨ರಂದು ಅನುಸೂಯ ಜಯಂತಿ ಮತ್ತು ೧೪ ರಂದು ದತ್ತ ಜಯಂತಿಗೆ ಐ.ಡಿ. ಪೀಠಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಹೊರ ಜಿಲ್ಲೆಗಳಿಂದ ಬರುವ ಭಕ್ತರು ಲಾಂಗ್ ಚಾರ್ಸಿ ಬಸ್ ಅಥವಾ ಇತರೆ ವಾಹನಗಳನ್ನು ಬಳಸದೆ ಸಣ್ಣ ಸಣ್ಣ ವಾಹನಗಳಲ್ಲಿ ಬಂದು ದರ್ಶನ ಮಾಡಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅದೇ ಸ್ಥಳದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಭಕ್ತರ ಅನುಕೂಲಕ್ಕಾಗಿ ಸೂಚನಾ ಫಲಕಗಳನ್ನು ಆಳವಡಿಸಲಾಗುವುದು. ಅವುಗಳನ್ನು ಪಾಲಿಸುವಂತೆ ಹಾಗೂ ಬರುವ ಭಕ್ತರು ಯಾವುದೇ ಕಾರಣಕ್ಕೂ ಅಹಿತಕರ ವಾತಾವರಣ ಉಂಟಾಗದಿರುವAತೆ ಸಹಕರಿಸಬೇಕು ಎಂದು ಹೇಳಿದರು.
ಎಸ್‌ಪಿ ಡಾ. ವಿಕ್ರಂ ಅಮಟೆ ಮಾತನಾಡಿ, ದತ್ತ ಜಯಂತಿ ಕಾರ್ಯಕ್ರಮದ ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ಪರೀಕ್ಷೆ ಮಾಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು ಕೆಎಸ್‌ಆರ್‌ಟಿಸಿ ಯಿಂದ ಮಿನಿ ಬಸ್‌ಗಳನ್ನು ವ್ಯವಸ್ಥೆ ಮಾಡಬೇಕು. ೩ ದಿನಗಳು ವಿದ್ಯುತ್ ಕಡಿತವಾಗದಂತೆ ಮೆಸ್ಕಾಂ ಇಲಾಖೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಎಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಎಎಸ್‌ಪಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತಹಸೀಲ್ದಾರ್ ಡಾ. ಸುಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.