

ಶನಿವಾರಸಂತೆ: ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರ, ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಅರಿವು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯಾ, ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳನ್ನು ಕಲಿಕಾ ಕ್ಷೇತ್ರಕ್ಕೆ ತರುವ ಹಾಗೂ ಅವರಿಗೆ ಉಪಯುಕ್ತ ಚಟುವಟಿಕೆ ಆಯೋಜಿಸಿ ಈ ಮೂಲಕ ಅವರಿಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತ ಸ್ವಾತಂತ್ರ್ಯ ದಿನಾಚರಣಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಮೂಲಕ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತದೆ ಎಂದರು.
ದುಂಡಳ್ಳಿ ಗ್ರಾಪಂ ಪಿಡಿಒ ಆಯಿಷಾ ಮಾತನಾಡಿ, ವಿದ್ಯಾರ್ಥಿಗಳು ಅರಿವು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದ ಅರಿವು ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಕಾರ್ಯಕ್ರಮದ ಉಪಯೋಗವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಅಭಿಯಾನ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ರಾಷ್ಟ್ರ ಭಕ್ತಿ, ರಾಷ್ಟ್ರೀಯ ತ್ರಿವರ್ಣ ಧ್ವಜದ ಮಹತ್ವ, ಸಂವಿಧಾನದ ಮಹತ್ವ ಕುರಿತು ಮಾಹಿತಿಯ ಜತೆಯಲ್ಲಿ ಮಕ್ಕಳು ತ್ರಿವರ್ಣ ಧ್ವಜ, ಸ್ವಾತಂತ್ರ್ಯ ದಿನಾಚರಣೆ ದಿನದ ಬ್ಯಾಡ್ಜ್‌ಗಳನ್ನು ತಯಾರಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿತರಿಸಲಾಯಿತು. ಗ್ರಾಪಂ ಸದಸ್ಯ ಡಿ.ಪಿ.ಬೋಜಪ್ಪ, ಪಿಡಿಒ ಆಯಿಷಾ ಸಾರ್ವಜನಿಕರು ಹಾಜರಿದ್ದರು.