

ಬೆಳಗಾವಿ: ಸದಾಕಾಲ ದಟ್ಟಣೆಯಿಂದ ಕೂಡಿರುವ ಹಾಗೂ ಅತಿಕ್ರಮಣದ ಸುಳಿಗೆ ಸಿಲುಕಿರುವ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆಯಲ್ಲಿ ಈಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ಓಡಾಡುತ್ತಿದ್ದು, ತೀವ್ರ ಸಂಚಾರ ದಟ್ಟನೆಯಿಂದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಪರದಾಡುವಂತಾಗಿದೆ.
ಬಸ್ ನಿಲ್ದಾಣದಿಂದ ಹೊರಹೋಗುವ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಯಿಂದ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳು ಸಾಮಾನ್ಯವಾಗಿ ಕೋಟೆ ಕೆರೆ ಬಳಿಯ ಅಶೋಕ ವೃತ್ತದ ಮೂಲಕವೇ ಓಡಾಡುತ್ತಿದ್ದವು. ಆದರೆ, ಈಚೆಗೆ ಬಹಳಷ್ಟು ಬಸ್‌ಗಳು ಅಶೋಕ ವೃತ್ತವನ್ನು ತಪ್ಪಿಸಿ, ಮಾರ್ಕೆಟ್ ಪೊಲೀಸ್ ಠಾಣೆ ಬದಿಯ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ.
ಈ ರಸ್ತೆಯಲ್ಲಿ ಅರಣ್ಯ ಇಲಾಖೆ ಕಚೇರಿ ಆವರಣ ಗೋಡೆಯುದ್ದಕ್ಕೂ ಕಾರುಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಎದುರಿನ ಭಾಗದ ರಸ್ತೆಯನ್ನು ಹಲವು ಅಂಗಡಿ-ಮಳಿಗೆಗಳು ಅತಿಕ್ರಮಿಸಿಕೊಂಡಿದ್ದು, ಆ ಅಂಗಡಿಗಳ ಮುಂದೆಯೂ ಬೈಕ್ ಹಾಗೂ ಕಾರುಗಳನ್ನು ಅನಧಿಕೃತವಾಗಿ ಪಾರ್ಕ್ ಮಾಡಲಾಗಿರುತ್ತದೆ. ಈ ರಸ್ತೆಯಲ್ಲಿರುವ ಹೋಟೆಲ್‌ಗಳ ಮುಂದೆ ಸಾಲು ಸಾಲು ಆಟೋಗಳು ರಸ್ತೆಯಲ್ಲೇ ನಿಂತಿರುತ್ತವೆ. ಇದರಿಂದ ರಸ್ತೆ ಸಾಕಷ್ಟು ವಿಶಾಲವಾಗಿದ್ದರೂ ಕಿಷ್ಕಿಂಧೆಯಂತಾಗಿರುತ್ತದೆ. ಇವೆಲ್ಲದರ ಮಧ್ಯೆಯೇ ಸಾರ್ವಜನಿಕರ ಬೈಕ್, ಕಾರು, ಪಾದಚಾರಿಗಳು ಸಾಗಬೇಕಿದ್ದು, ದಿನದಿಂದ ದಿನಕ್ಕೆ ಸಂಚಾರ ದಟ್ಟನೆ ಸಮಸ್ಯೆ ಹೆಚ್ಚುತ್ತಿದೆ.
ಹೊಸ ಸಿಟಿ ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡ ಬಳಿಕ ಕೇಂದ್ರ ನಿಲ್ದಾಣಕ್ಕೆ ಹೋಗುತ್ತಿದ್ದ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುವುದನ್ನು ನಿಲ್ಲಿಸಲಾಗಿತ್ತು. ಆದರೆ, ಈಚೆಗೆ ಅಶೋಕ ವೃತ್ತದ ಬಳಿಯೂ ಸಂಚಾರ ದಟ್ಟನೆ ಹೆಚ್ಚುತ್ತಿದೆ ಎಂಬ ಕಾರಣದಿಂದ ಕೆಲ ಬಸ್‌ಗಳಿಗೆ ಮಾರ್ಕೆಟ್ ಪೊಲೀಸ್ ಠಾಣೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಆದರೆ, ಅದಕ್ಕೆ ತಕ್ಕಂತೆ ಈ ರಸ್ತೆಯಲ್ಲಿನ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ಮಾತ್ರ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ಈ ರಸ್ತೆಯಲ್ಲಿ ಮೊದಲಿನಿಂದಲೂ ಬಸ್‌ಗಳು ಸಂಚರಿಸುತ್ತಿದ್ದವು. ಸಿಟಿ ಬಸ್ ನಿಲ್ದಾಣ ಉದ್ಘಾಟನೆಯ ನಂತರ ಅಧಿಕೃತವಾಗಿ ಇದೇ ಮಾರ್ಗದಲ್ಲಿ ಎಲ್ಲ ಬಸ್‌ಗಳು ಓಡಾಡಲಿವೆ. ಈಗ ಪ್ರಾಯೋಗಿಕವಾಗಿ ಒಂದಷ್ಟು ಬಸ್‌ಗಳು ಓಡಾಡುತ್ತಿವೆ. ರಸ್ತೆಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದು ಹಾಗೂ ಅತಿಕ್ರಮಣ ಮುಖ್ಯ ಸಮಸ್ಯೆಯಾಗಿದೆ. ಈ ರಸ್ತೆಯನ್ನು ಅತಿಕ್ರಮಣ ಹಾಗೂ ಅನಧಿಕೃತ ಪಾರ್ಕಿಂಗ್‌ನಿಂದ ಮುಕ್ತಗೊಳಿಸುವಂತೆ ಈಗಾಗಲೇ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ. | ಕೆ.ಎಲ್.ಗುಡನ್ನವರ ವಿಭಾಗೀಯ ನಿಯಂತ್ರಣಾಧಿಕಾರಿ, ವಾಯವ್ಯ ಸಾರಿಗೆ ಸಂಸ್ಥೆ