

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ನಿರುದ್ಯೋಗ ನಿವಾರಣೆ ಮತ್ತು ಕೃಷಿ ಆಧರಿತ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಭಾಗದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ , ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಹೇಳಿದರು.
ದಕ್ಷಿಣ ಕ್ಷೇತ್ರಕ್ಕೆ ಕೈಗಾರಿಕೆಗಳನ್ನು ತರಲು ಸಾಕಷ್ಟು ಪ್ರಯತ್ನ ಮಾಡುತ್ತಿರುವೆ. ಇದೀಗ ಸ್ವತಃ ನಾನೇ ಈ ಭಾಗದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಸೂಕ್ತ ಸ್ಥಳದ ಶೋಧ ನಡೆದಿದೆ. ಮೊದಲ ಹಂತದಲ್ಲಿ 500 ಎಕರೆಯಲ್ಲಿ ಈ ಘಟಕ ಸ್ಥಾಪನೆ ಮಾಡುತ್ತಿದ್ದು, ಇದಕ್ಕೆ ರೈತರಿಂದ ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆಯಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ನಂತರ ಹಂತ, ಹಂತವಾಗಿ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಘಟಕ ಸ್ಥಾಪಿಸುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಳ್ಳಿಗಳಿಂದ ಕೂಡಿರುವಂತಹ ದಕ್ಷಿಣ ಕ್ಷೇತ್ರಕ್ಕೆ ಪೂರಕವಾಗುವಂಥ ಟೆಕ್ಸ್ ಟೈಲ್ ಕೈಗಾರಿಕೆ ತರುವ ಸಂಬಂಧ ಉದ್ಯಮಿಗಳ ಜತೆ ಚರ್ಚೆ ನಡೆಸಲಾಗಿದೆ. ಕೃಷಿಗೆ ಸಂಬಂಧಿತ ಕೈಗಾರಿಕೆ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುವ ಜತೆಯಲ್ಲಿ ರೈತರಿಗೂ ಆರ್ಥಿಕವಾಗಿ ಸಬಲರಾಗಿ ಮಾಡಲು ಸಾಧ್ಯ. ನಾನು ಅಧಿಕಾರದಲ್ಲಿ ಇರದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸಿದ್ಧನಾಗಿ ವಿವಿಧ ಕೆಲಸಗಳನ್ನು ಮಾಡುತ್ತಿರುವೆ ಎಂದರು.
ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿತ್ತು. ಆದರೆ ನಾನು ಬೇಡ ಎಂದು ಹೈಕಮಾಂಡ್ ಗಮನಕ್ಕೆ ತಂದಿರುವೆ. ಸ್ಥಳೀಯರಿಗೆ ಟಿಕೆಟ್ ಕೊಡುವಂತೆಯೂ ಸಲಹೆ ನೀಡಿರುವೆ. ಹೊರಗಿನವರಿಗಿಂತ ಸ್ಥಳೀಯರಿಗೆ ಆದ್ಯತೆ ನೀಡಿದರೆ ಉತ್ತಮ ಎಂದು ಹೇಳಿದರು.
ಬೀದರ್ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಚನ್ನಶೆಟ್ಟಿ, ಪ್ರಮುಖರಾದ ಶಿವಕುಮಾರ ಜುನ್ನಾ, ಅಬ್ದುಲ್ ಕರೀಮ್ ಇದ್ದರು.
ಖೇಣಿರಂಜೋಳದಲ್ಲಿ ವಾಸ
ಕ್ಷೇತ್ರದಲ್ಲಿದ್ದುಕೊಂಡು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸ್ವಗ್ರಾಮ ಖೇಣಿ ರಂಜೋಳದ ಪೂರ್ವಜರ ಮನೆಯನ್ನು ಮರು ನಿರ್ಮಾಣ (ರಿನಿವೇಷನ್) ಮಾಡುತ್ತಿರುವೆ. ಮುಂಬರುವ ದಿನಗಳಲ್ಲಿ ಅಲ್ಲಿಯೇ ವಾಸ ಮಾಡುವೆ ಎಂದು ಅಶೋಕ ಖೇಣಿ ಹೇಳಿದರು. ಇಲ್ಲೇ ನೆಲೆಸಿದರೆ ದಕ್ಷಿಣ ಕ್ಷೇತ್ರದ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಜತೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲಿದೆ. ಹೀಗಾಗಿ ಹಳೇ ಮನೆ ರಿನಿವೇಷನ್ ಮಾಡುತ್ತಿರುವೆ ಎಂದರು.
ಜೋ ಬೈಡೆನ್ ಸ್ನೇಹಿತ
ಅಮೆರಿಕದ ನೂತನ ರಾಷ್ಟ್ರಪತಿ ಜೋ ಬೈಡೆನ್ ನನ್ನ ಆತ್ಮೀಯ ಸ್ನೇಹಿತ ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು. ಅಮೆರಿಕದಲ್ಲಿ ನಾವಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದೇವೆ. ಜೆ.ಎಚ್.ಪಟೇಲ್ ಅವರು ಅಮೆರಿಕಕ್ಕೆ ಬಂದಿದ್ದ ವೇಳೆ ಜೋ ಬೇಡೆನ್ ಅವರಿಗೆ ಭೇಟಿ ಮಾಡಿಸಿದ್ದೆ. ಭಾರತಕ್ಕೆ ಬಂದ ನಂತರ ಜೋ ಬೇಡೆನ್ ಸಂಪರ್ಕ ಕಟ್ ಆಯಿತು. ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಶೀಘ್ರ ನಮ್ಮಿಬ್ಬರ ಭೇಟಿ ಆಗಬಹುದು ಎಂಬ ಆಶಾಭಾವ ಹೊಂದಿರುವೆ ಎಂದರು.
ಹಿಂದೆ ಶಾಸಕರಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ಸುಮಾರು 2250 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ಇದೀಗ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ. ನಾನು ಮಾಡಿದ ಹಲವು ಕಾಮಗಾರಿಗಳ ನಿರ್ವಹಣೆ ಸಹ ನಡೆದಿಲ್ಲ. ಕ್ಷೇತ್ರದ ಹಲವು ರಸ್ತೆಗಳು ಹಾಳಾಗಿವೆ. ರಾಜ್ಯದಲ್ಲಿ ಸರ್ಕಾರ ಇದೆಯೋ? ಇಲ್ಲವೋ ಎಂಬ ಭಾವ ಜನರಲ್ಲಿ ಮೂಡಿದೆ. | ಅಶೋಕ ಖೇಣಿ, ಮಾಜಿ ಶಾಸಕ