

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕ್ರೀಡೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಬೆಳಗಾವಿ ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಹೇಳಿದರು.
ನಗರದ ಎಸ್‌ಡಿಎಂ ಇಂಜಿನಿಯರಿ0ಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳತ್ತ ಗಮನ ಹರಿಸುವುದರಿಂದ ಯುವಕರು ದುಶ್ಚಟಗಳಿಂದ ದೂರ ಇರಬಹುದು. 3 ದಿನಗಳ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಡ್ಮಿಂಟನ್ ಪಂದ್ಯಾವಳಿಯ ಯಶಸ್ಸಿಗೆ ಎಸ್‌ಡಿಎಂಸಿಇಟಿ ಕೈಗೊಂಡ ಪ್ರಯತ್ನಗಳನ್ನು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ಕುಮಾರ್ ಮಾತನಾಡಿ, ಕ್ರೀಡೆಗಳು ವ್ಯಕ್ತಿಯ ವೃತ್ತಿಪರ ಬೆಳವಣಿಗೆಗೆ ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳು ವರ್ಚುವಲ್ ಗೇಮಿಂಗ್ ಜಗತ್ತಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಪ್ರಾಚಾರ್ಯ ಡಾ. ರಮೇಶ ಎಲ್. ಚಕ್ರಸಾಲಿ ಪಂದ್ಯಾವಳಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ಡಿಎಂಇ ಸೊಸೈಟಿಯ ಕಾರ್ಯದರ್ಶಿ ಜೀವಂಧರ್ ಕುಮಾರ್, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ನೇತ್ರತಜ್ಞೆ ಡಾ. ಮೃದುಲಾ ಪ್ರಭು, ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ. ವಿಜಯಕುಮಾರ್ ಉಪಸ್ಥಿತರಿದ್ದರು.
ಪ್ರೊ. ಕುಶಾಲ್ ಕಪ್ಪಳಿ ಪರಿಚಯಿಸಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ವಿ.ಕೆ. ಪರ್ವತಿ ವಂದಿಸಿದರು.
ಮೂರು ದಿನಗಳ ಪಂದ್ಯಾವಳಿಯಲ್ಲಿ ದಕ್ಷಿಣ ಭಾರತದ 80ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಮೊದಲ ದಿನ ಸಿಂಗಲ್ಸ್ ಮತ್ತು ಡಬಲ್ಸ್ ನಾಕೌಟ್ ಪಂದ್ಯಗಳು ನಡೆದವು.