

ಬೆಳಗಾವಿ: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಅಪರಾಧ ಚಟುವಟಿಕೆಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಮುಖ ರಸ್ತೆ, ವೃತ್ತಗಳಲ್ಲಿ 256 ಅತ್ಯಾಧುನಿಕ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ಶಹಾಪುರದಲ್ಲಿ ಸೋಮವಾರ ದಕ್ಷಿಣ ಕ್ಷೇತ್ರದಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು 3.20 ಕೋಟಿ ರೂ. ವೆಚ್ಚದಲ್ಲಿ 256 ಕ್ಯಾಮರಾ ಅಳವಡಿಸಲಾಗುತ್ತಿದೆ. ರಾತ್ರಿ ವೇಳೆಯೂ ಈ ಕ್ಯಾಮರಾಗಳಿಂದ ಸ್ಪಷ್ಟ ಚಿತ್ರೀಕರಣ ನಡೆಯಲಿದೆ. ಅತ್ಯಾಧುನಿಕ ಕ್ಯಾಮರಾ ಅಳವಡಿಕೆಯಿಂದ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.
ನಗರದಲ್ಲಿ ಶಾಂತಿ ಕದಡುವ ಕಿಡಿಗೇಡಿಗಳನ್ನು ಪತ್ತೆ ಮಾಡಲು ಈ ಕ್ಯಾಮರಾಗಳು ಸಹಾಯವಾಗಲಿವೆ ಎಂದರು. ಒಂದೇ ಕ್ಷೇತ್ರದಲ್ಲಿ 90 ವೃತ್ತಗಳಲ್ಲಿ, 256 ಕ್ಯಾಮರಾ ಅಳವಡಿಸುತ್ತಿರುವುದು ದೇಶದಲ್ಲೇ ಮೊದಲು. ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿದೆ. ಸಂಚಾರದಲ್ಲಿ ಶಿಸ್ತು ಕಾಪಾಡಲು ಕ್ಷೇತ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಮಾರ್ಕೆಟ್ ಎಸಿಪಿ ಕಟ್ಟಿಮನಿ, ಪಿಐ ವಿನಾಯಕ ಬಡಿಗೇರ ಇತರರಿದ್ದರು.