ದಕ್ಷಿಣ ಕೊಡಗಿನಲ್ಲಿ ಭತ್ತದ ಗದ್ದೆಗಳು ಕಣ್ಮರೆ

10 gkp 01
ಒಂದು ಕಾಲದಲ್ಲಿ ಭತ್ತದ ಕೃಷಿ ಪ್ರದೇಶ ಈಗ ಪಾಳು ಬಿದ್ದಿರುವುದು.
Published on

ಗೋಣಿಕೊಪ್ಪ: ಕಾಡು ಪ್ರಾಣಿಗಳ ಹಾವಳಿ, ಬೆಂಬಲ ಬೆಲೆ ಮತ್ತು ಕೂಲಿ ಕಾರ್ಮಿಕರ ಕೊರತೆಯಿಂದ ದಕ್ಷಿಣ ಕೊಡಗಿನ ಭಾಗದಲ್ಲಿ ಭತ್ತದ ಗದ್ದೆಗಳು ಕಣ್ಮರೆಯಾಗುತ್ತಿವೆ.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಬುಧವಾರ ಗೋಣಿಕೊಪ್ಪದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ರೈತರು, ಭತ್ತದೆ ಬೆಳೆಯಿಂದ ವಿಮುಖವಾಗುತ್ತಿರುವ ಕುರಿತು ಅಳಲು ತೋಡಿಕೊಂಡರು.

ಕೊಡಗು ಕೃಷಿ ಪ್ರಧಾನ ಜಿಲ್ಲೆ. ಕಾಫಿ, ಕಾಳುಮೆಣಸು ಮತ್ತು ಭತ್ತ ಇಲ್ಲಿನ ಪ್ರಧಾನ ಬೆಳೆ. ದಕ್ಷಿಣ ಕೊಡಗಿನ ಭಾಗ ಭತ್ತ ಬೆಳೆಯಲು ಸೂಕ್ತ ಪ್ರದೇಶ. ಹಿಂದಿನಿಂದಲೂ ಇಲ್ಲಿ ಯತೇಚ್ಛವಾಗಿ ಭತ್ತ ಬೆಳೆಯಲಾಗುತ್ತಿತ್ತು. ಮಳೆಗಾಲ ಮುಗಿಯುತ್ತಿದ್ದಂತೆ ಇಲ್ಲಿನ ಭತ್ತದ ಗದ್ದೆಗಳು ಹಚ್ಚ ಹಸುರಾಗಿ ನಳನಳಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಗಳು ಪಾಳು ಬೀಳುತ್ತಿವೆ. ಜತೆಗೆ ವಾಣಿಜ್ಯ ಬೆಳೆಗಳು ಗದ್ದೆಗಳನ್ನು ಆಕ್ರಮಿಸಿಕೊಳ್ಳುತ್ತಿದೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕೊಡಗಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಭತ್ತದ ಪೈರಗಳು ಹೆಚ್ಚಾಗಿ ನಾಶವಾಗುತ್ತಿದೆ. ಕಾಡಾನೆಗಳ ನಿಯಂತ್ರಣಕ್ಕೆ ಸೋಲಾರ್ ಬೇಲಿ ಅಳವಡಿಸಲಾಗುತ್ತಿದೆಯಾದರೂ ಪ್ರಯೋಜನವಾಗುತ್ತಿಲ್ಲ. ಈ ನಡುವೆ ನಿತ್ಯ ರಾತ್ರಿ ನಿದ್ದೆಗೆಟ್ಟು ಗದ್ದೆಯನ್ನು ಕಾವಲು ಕಾದರೂ ಪ್ರಯೋಜನವಾಗುತ್ತಿಲ್ಲ. ಇನ್ನು ಹವಾಮಾನ ವೈಪರೀತ್ಯ ಕೂಡ ಭತ್ತದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೂಲಿ ಕಾರ್ಮಿಕರ ಕೊರತೆ ಮತ್ತು ಹೆಚ್ಚು ಕೂಲಿ ನೀಡಬೇಕಾದ ಅನಿವಾರ್ಯತೆ ಇದೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಕೃಷಿ ಮಾಡ್ದಿರೆ ಸರ್ಕಾರದ ವತಿಯಿಂದ ಸರಿಯಾದ ಬೆಂಬಲ ಬೆಲೆ ಸಿಗದೇ ಇರುವುದು ಮತ್ತೊಂದು ಸಮಸ್ಯೆಯಾಗಿದೆ. ಲಾಭ ಅಲ್ಲದಿದ್ದರೂ ನಾವು ಹಾಕಿದ ಬಂಡವಾಳ ಕೂಡ ಸಿಗುತ್ತಿಲ್ಲ ಎನ್ನುತ್ತಾರೆ ರೈತರು.

ಸರ್ಕಾರದ ವತಿಯಿಂದ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಯಾಂತ್ರೀಕರಣಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕು. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಇನ್ನಷ್ಟು ಕ್ರಮ ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಭತ್ತದ ಗದ್ದೆಗಳು ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿದಸಿದರು.

ಕೃಷಿ ಅಧಿಕಾರಿ ಲವಿನ್ ಮಾದಪ್ಪ ಮಾತನಾಡಿ, ಇಲಾಖೆ ವತಿಯಿಂದ ಬಿತ್ತನೆ ಬೀಜ ಖರೀದಿಗೆ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕಟಾವಿನ ನಂತರವೂ ಬೆಂಬಲೆ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಯಾಂತ್ರೀಕೃತ ಕೃಷಿಗೆ ಒತ್ತು ನೀಡಬೇಕು. ಸಂವರ್ಧಿತ ತಳಿಗಳನ್ನು ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದರು.

ಕೇರಳ ಮಾದರಿಯಲ್ಲಿ ಬೆಂಬಲ ಬೆಲೆಯನ್ನು ಇಲ್ಲೂ ನಿಡುವಂತೆ ಸರ್ಕಾರಕ್ಕೆ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂದು ಮಾಹಿತಿ ನೀಡಿದರು. ಈ ಸಂದರ್ಭ ರೈತರಾದ ಪೋರಂಗಡ ಪವನ್ ಚಿಟ್ಟಿಯಪ್ಪ, ಕೆ.ಜೆ ಮಧು , ಬಿ.ಪಿ ರವಿಶಂಕರ್ ಭತ್ತದ ಕೃಷಿಯ ಸಮಸ್ಯೆ ಮತ್ತು ಸವಾಲುಗಳ ಕುರಿತು ಬೆಳಕು ಚೆಲ್ಲಿದರು.

35 ವಿವಿಧ ತಳಿ ಸಂರಕ್ಷಣೆ
ಬಿತ್ತನೆ ಭತ್ತ ಬೆಳೆದರೆ ಲಾಭ ಇದೆ. ಎಲ್ಲರೂ ಇಂದು ಭತ್ತದ ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಸರ್ಕಾರ ಕೂಡ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಗದ್ದೆಯನ್ನು ನೋಡಲು ಸಾಧ್ಯ. ಪ್ರಸ್ತುತ ನನ್ನ ಬಳಿ 35 ವಿವಿಧ ತಳಿಯ ಭತ್ತವನ್ನು ಸಂರಕ್ಷಿಸಿ ನಾಟಿ ಮಾಡುತ್ತಿದ್ದೇನೆ. ಜಿಲ್ಲೆ ಅಲ್ಲದೆ ಹೊರ ಜಿಲ್ಲೆಗಳಿಂದಲೂ ಜನರು ಬಿತ್ತನೆ ಬೀಜ ಕೊಳ್ಳಲು ಸಂಪರ್ಕಿಸುತ್ತಾರೆ.
ಬಿ.ಪಿ ರವಿಶಂಕರ್ ಯುವ ಕೃಷಿ ಪಂಡಿತ ಪ್ರಶಸ್ತಿ ವಿಜೇತ, ಹುದೂರು

ಸೋಲಾರ್ ಬೇಲಿಯಿಂದಲೂ ಪ್ರಯೋಜನವಿಲ್ಲ
2017ಕ್ಕೂ ಮೊದಲು ನಾವು 30ಕ್ಕೂ ಹೆಚ್ಚು ಎಕರೆ ಭತ್ತ ಬೆಳೆಯುತ್ತಿದ್ದೆವು. ಆದರೆ ನಂತರದ ವರ್ಷಗಳಲ್ಲಿ ಕಾಡಾನೆಗಳ ಹಾವಳಿ ತೀವ್ರವಾದ ಹಿನ್ನೆಲೆಯಲ್ಲಿ ಭತ್ತದ ಕೃಷಿಯನ್ನು ಕೈಬಿಡಬೇಕಾಯ್ತು. ಸೋಲಾರ್ ಬೇಲಿ ಅಳವಡಿಸಿದರೂ ಕಾಡಾನೆಗಳನ್ನು ನಿಯಂತ್ರಿಸಲು ಆಗುತ್ತಿರಲಿಲ್ಲ. ಪೈರನ್ನೇ ತುಳಿದು ನಾಶ ಪಡಿಸುತ್ತಿದ್ದವು. ಕೆಲವೊಮ್ಮೆ ಎಕರೆ ಗಟ್ಟಲೆ ಭತ್ತ ಆನೆಯ ಹೊಟ್ಟೆ ಸೇರುತ್ತಿತ್ತು. ಕೊನೆಯಲ್ಲಿ ಬೆಂಬಲ ಬೆಲೆ ಕೂಡ ನಮ್ಮ ಅಸಲಿಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ಬೇರೆ ಕೃಷಿಯತ್ತ ಮುಖ ಮಾಡಬೇಕಾಯಿತು.
ಕೆ.ಜೆ ಮಧು ಕೃಷಿಕ, ಮಾಯಮುಡಿ

ಅವೈಜ್ಞಾನಿಕ ಸೇತುವೆಯಿಂದ ಸಂಕಷ್ಟ
ನಿಟ್ಟೂರು ಹೊಳೆ ಬದಿ ನಮ್ಮ ಗದ್ದೆ ಇದೆ. ಎಷ್ಟೇ ಕಷ್ಟ ಬಂದರೂ ಬಿಡಬಾರದು ಎಂಬ ಕಾರಣಕ್ಕಾಗಿ 60 ಎಕರೆ ಗದ್ದೆ ಮಾಡುತ್ತಿದ್ದೇವೆ. ಆದರೆ ಇತ್ತೀಚೆಗೆ ನಿರ್ಮಿಸಿದ ಅವೈಜ್ಞಾನಿಕ ಸೇತುವೆಯಿಂದ ನೀರು ಸರಾಗವಾಗಿ ಹೋಗದೆ ಗದ್ದೆಗಳತ್ತ ನುಗ್ಗಿ ಬೆಳೆ ನಷ್ಟವಾಗುತ್ತಿದೆ. ಆದರರೂ ನಾವು ಮಾತ್ರ ತಪ್ಪದೆ ಕೃಷಿ ಮುಂದುವರಿಸಿದ್ದೇವೆ. ಬೆಂಬಲ ಬೆಲೆ ನೀಡಿದರೂ ಭತ್ತ ಮಾರುವಾಗ ಚೀಲದ ಮೇಲೆ 2 ಕೆ.ಜಿ ಯಂತೆ ಕಡಿಮೆ ಮಾಡುತ್ತಾರೆ. ಇದು ಕೂಡ ನಮಗೆ ನಷ್ಟವೇ.
ಪೋರಂಗಡ ಪವನ್ ಚಿಟ್ಟಿಯಪ್ಪ ಕೃಷಿಕ, ನಿಟ್ಟೂರು

ಕೂಲಿ ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಭತ್ತದ ಕೃಷಿಯಿಂದ ದೂರ ಆಗುತ್ತಿದ್ದಾರೆ. ಆದರೆ ಇಂದು ಕೊಡಗಿನ ಮಟ್ಟಿಗೆ ಹೆಚ್ಚು ಇಳುವರಿ ನೀಡುವ ಬಹಳಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಎಚ್‌ಪಿ 11, ತುಂಗಾ 23 ಉತ್ತಮ. ಅಲ್ಲದೆ ರೈತರು ಎರಚು ವಿಧಾನ, ಡ್ರಂ ಸೀಡರ್ ಬಳಕೆ, ಯಾಂತ್ರೀಕೃತ ಕೃಷಿಗೆ ಒತ್ತು ನೀಡಿದರೆ ಖಂಡಿತ ಭತ್ತದ ಕೃಷಿಯಿಂದ ಲಾಭ ಗಳಿಸಬಹುದು.
ಡಾ.ಎನ್.ವಿ.ಮೋಹನ್‌ಕುಮಾರ್ ವಿಷಯ ತಜ್ಞ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ

ಕೃಷಿ ಇಲಾಖೆ ವತಿಯಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ರೈತರಿಗೆ ಒದಗಿಸಲಾಗಿದೆ. ಆಧುಕನಿಕ ಪದ್ಧತಿಯಂತೆ ಭತ್ತ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ಬಿತ್ತನೆ ಬೀಜಕ್ಕೆ ಬೆಂಬಲ ಬೆಲೆ, ಕಟಾವಿನ ನಂತರ ಬೆಂಬಲ ಬೆಲೆ ನೀಡಲಾಗುತ್ತಿದೆ. ರೈತರನ್ನು ಉತ್ತೇಜಿಸಲು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸಂವರ್ಧಿತ ತಳಿಗಳನ್ನು ರೈತರಿಗೆ ಪರಿಚಯಿಸಲಾಗುತ್ತಿದೆ.
ಲವಿನ್ ಮಾದಪ್ಪ ಕೃಷಿ ಅಧಿಕಾರಿ, ವಿರಾಜಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net