ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಸಾವು

corona
Published on

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇದುವರೆಗಿನ ಅತ್ಯಧಿಕ 238 ಕೋವಿಡ್ ಪ್ರಕರಣಗಳು ಗುರುವಾರ ದಾಖಲಾಗಿದ್ದು, ಒಂದೇ ದಿನ 6 ಮಂದಿ ಮರಣ ಹೊಂದಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ಮರಣ ಹೊಂದಿದವರಲ್ಲಿ ಒಬ್ಬರು ಬೆಳಗಾವಿಯ ರಾಮದುರ್ಗದ ವ್ಯಕ್ತಿಯೂ ಸೇರಿದ್ದಾರೆ. ಡಯಾಬಿಟಿಸ್, ಹೈಪರ್ ಕಲೇಮಿಯಾ(ರಕ್ತದಲ್ಲಿ ಅಧಿಕ ಪೊಟಾಶಿಯಂ ಇರುವುದು)ದಿಂದ ನರಳುತ್ತಿದ್ದ 68ರ ಈ ವ್ಯಕ್ತಿ ಬುಧವಾರ ಮೃತರಾಗಿದ್ದು, ಅವರಿಗೆ ಗುರುವಾರ ಕರೊನಾ ದೃಢಪಟ್ಟಿದೆ.

ಮಂಗಳವಾರ ಮೃತಪಟ್ಟಿದ್ದ ಕಿಡ್ನಿ ಸಮಸ್ಯೆ ಹೊಂದಿದ್ದ ಮೂಲ್ಕಿ ನಿವಾಸಿ 44ರ ಪುರುಷ, ಬುಧವಾರ ಮೃತರಾದ ತೀವ್ರ ಲಿವರ್ ಕಾಯಿಲೆ, ಹೈಪರ್‌ಟೆನ್ಶನ್ ಇದ್ದ ಮಂಗಳೂರಿನ 62ರ ವೃದ್ಧ, ಗುರುವಾರ ಐಸಿಯುನಲ್ಲಿದ್ದು ಮೃತರಾದ ಕಿಡ್ನಿ ಕಾಯಿಲೆ, ಡಯಾಬಿಟಿಸ್ ಹೊಂದಿದ್ದ 66ರ ವೃದ್ಧ, ಡಯಾಬಿಟಿಸ್, ಹೈಪರ್‌ಟೆನ್ಶನ್ ಹೊಂದಿದ್ದ ಬಂಟ್ವಾಳದ 47ರ ಮಹಿಳೆ ಹಾಗೂ ತೀವ್ರ ಉಸಿರಾಟ ಸಮಸ್ಯೆ, ಸೆಪ್ಸಿಸ್, ಬಹುಅಂಗ ವೈಫಲ್ಯ ಇದ್ದು ಮೃತಪಟ್ಟ 76ರ ವೃದ್ಧೆಯ ಗಂಟಲು ದ್ರವ ಮಾದರಿ ಪರೀಕ್ಷೆ ಪಾಸಿಟಿವ್ ಬಂದಿದೆ.

238 ಪಾಸಿಟಿವ್ ಪ್ರಕರಣಗಳಲ್ಲಿ ಇನ್‌ಫ್ಲುಯೆಂಜಾ ಮಾದರಿ ಕಾಯಿಲೆ ಹೊಂದಿದ್ದ 106 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 23 ಮಂದಿಗೆ, ತೀವ್ರ ಉಸಿರಾಟ ತೊಂದರೆ ಕಂಡು ಬಂದಿದ್ದ 17 ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ. ಗಲ್ಫ್ ಪ್ರಯಾಣದ 19 ಮಂದಿಗೆ ಪಾಸಿಟಿವ್ ಬಂದಿದ್ದರೆ 73 ಮಂದಿಯ ಸೋಂಕಿನ ಮೂಲ ಇನ್ನಷ್ಟೇ ಪತ್ತೆಯಾಗಬೇಕಿದೆ.

ಒಟ್ಟು ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ 2763ಕ್ಕೆ ಏರಿಕೆಯಾಗಿದ್ದು, ಗುರುವಾರ 74 ಮಂದಿ ಗುಣವಾಗಿ ಮನೆಗೆ ತೆರಳಿದ್ದಾರೆ. 1537 ಸಕ್ರಿಯ ಪ್ರಕರಣಗಳಿವೆ.

ಪುತ್ತೂರಿನ 3 ಪೊಲೀಸರಿಗೆ ಸೋಂಕು

ಪುತ್ತೂರು: ನಗರ ಮಹಿಳಾ ಪೊಲೀಸ್ ಠಾಣೆ ಜೀಪು ಚಾಲಕ, ನಗರ ಪೊಲೀಸ್ ಠಾಣೆ ಸಿಬ್ಬಂದಿ, ಅದೇ ಠಾಣೆಯ ಇನ್ನೋರ್ವ ಮಹಿಳಾ ಸಿಬ್ಬಂದಿಗೆ ಗುರುವಾರ ಕರೊನಾ ಸೋಂಕು ದೃಢಗೊಂಡಿದೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಯ 32 ವರ್ಷದ ಮಹಿಳಾ ಸಿಬ್ಬಂದಿಗೂ ಸೋಂಕು ತಗುಲಿದೆ.

ಕಾಸರಗೋಡಿನ 18 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯ 18 ಮಂದಿ ಸಹಿತ ಕೇರಳ ರಾಜ್ಯದಲ್ಲಿ ಗುರುವಾರ 722 ಮಂದಿಗೆ ಕೋವಿಡ್ ಬಾಧಿಸಿದೆ. ಇವರಲ್ಲಿ 157 ಮಂದಿ ವಿದೇಶ, 62 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದರೆ, 481 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 36ಕ್ಕೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net