

ಚಿತ್ರದುರ್ಗ:ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ದಂಪತಿ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥನನ್ನು ಪೊಲೀಸರು ಬಂ ಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಚಿತ್ರದುರ್ಗ ತಾಲೂಕು ಬೊಮ್ಮಕ್ಕನಹಳ್ಳಿಯಲ್ಲಿ ಸೆಪ್ಟೆಂಬರ್ 19 ರಂದು ಗ್ರಾಮದ ಹನುಮಂತಪ್ಪ (48)ಹಾಗೂ ಅವರ ಪತ್ನಿ ತಿಪ್ಪಮ್ಮ(45) ಅವರನ್ನು, ಅವರ ಜಮೀನಿನಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಮೃತರ ಪುತ್ರಿ ಹರ್ಷಿತಾ, ತನ್ನ ಪತಿ ಮಂಜುನಾಥ ಮತ್ತು ಆತನ ಸಂಬಂಧಿಕರ ವಿರುದ್ಧ ತುರುವನೂರು ಠಾಣೆಗೆ ದೂರು ನೀಡಿದ್ದಳು.
ತನಿಖೆ ನಡೆಸಿದ್ದ ಪೊಲೀಸರು ಕೃತ್ಯ ನಡೆದ ಒಂದೇ ದಿನದಲ್ಲಿ ಆರೋಪಿತರ ಪೈಕಿ ರಘು, ಚಂದ್ರಪ್ಪ ಹಾಗೂ ಮಲ್ಲಿಕಾರ್ಜುನ್‌ರನ್ನು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ, ಅಳಿಯ ಮಂಜುನಾಥ್ ತಲೆ ಮರೆಸಿಕೊಂಡಿದ್ದ. ಈತನ ಪತ್ತೆಗೆ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು.
ಟೆಲಿಕಾಂ ಕಂಪನಿಯಲ್ಲಿ ಕೆಲಸದಲ್ಲಿದ್ದ ಮಂಜುನಾಥ್ ಮೊಬೈಲ್ ಬಳಸದೇ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಈತನ ಗೆಳೆಯರ ಫೋನ್‌ಕಾಲ್ ರೆಕಾರ್ಡ್ಸ್, ಇಂಟರ್‌ನೆಟ್ ಮತ್ತು ವಾಟ್ಸ್‌ಆ್ಯಪ್ ಕರೆಗಳ ಜಾಡು ಹಿಡಿದ ತನಿಖಾಧಿಕಾರಿಗಳು ಅಂತಿಮವಾಗಿ ತೆಲಂಗಾಣದ ವಿಜಯವಾಡ ಜಿಲ್ಲೆ ಭದ್ರಾದ್ರಿಕೊತ್ತಗೊಡೆಂನಲ್ಲಿ ಬಂಧಿಸಿದ್ದಾರೆ.
ವಿಜಯವಾಡ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಪ್ರಕರಣದ ಕುರಿತಂತೆ ಇನ್ನಷ್ಟು ತನಿಖೆ ನಡೆಸಬೇಕಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಗಳಿಗೆ ನಗದು ಬಹುಮಾನ ಘೋಷಿಸಿರುವುದಾಗಿ ತಿಳಿಸಿದರು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ.ದಿನಕರ್ ಇದ್ದರು.