ದಂಡಿನ ಮಾರಮ್ಮ ತೆಪ್ಪೋತ್ಸವ ಅದ್ದೂರಿ

26
Published on

50 ವರ್ಷದ ಬಳಿಕ ಆಚರಣೆ, ಕಾಶಿ ಪಂಡಿತರಿಂದ ನೆರವೇರಿದ ಗಂಗಾರತಿ ಕಣ್ತುಂಬಿಕೊಂಡ ಭಕ್ತರು

 ಮಧುಗಿರಿ: ಮಧುಗಿರಿಯ ಇತಿಹಾಸ ಪ್ರಸಿದ್ಧ ದಂಡಿನಮಾರಮ್ಮ ದೇವಿ ತೆಪ್ಪೋತ್ಸವ 50 ವರ್ಷಗಳ ಬಳಿಕ ಅದ್ದೂರಿಯಾಗಿ ನೆರವೇರಿತು. ಪವಿತ್ರ ಕಾಶಿ ಕ್ಷೇತ್ರದಿಂದ 12 ಜನ ಪಂಡಿತರು ಆಗಮಿಸಿ 40 ನಿಮಿಷ ಗಂಗಾರತಿ ನೆರವೇರಿಸಿದ್ದು, ಭಕ್ತರನ್ನು ಪುಳಕಿತರನ್ನಾಗಿಸಿತು.

ಸಹಕಾರ ಸಚಿವ ಕೆ.ಎನ್​.ರಾಜಣ್ಣ, ಎಮ್ಮೆಲ್ಸಿ ರಾಜೇಂದ್ರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಉತ್ಸವ ನಡೆಯಿತು. ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು. ಸಾವಿರಾರು ಭಕ್ತರು ತೆಪ್ಪೋತ್ಸವ ಕಣ್ತುಂಬಿಕೊಂಡರು. ಕಾರ್ಯಕ್ರಮ ಪ್ರಯಾಗ್​ ರಾಜ್​ ಕುಂಭಮೇಳದಂತೆ ಅದ್ಭುತವಾಗಿದೆ ಎಂದು ಗೃಹ ಸಚಿವರು ಶ್ಲಾಘಿಸಿದರು. ಒಂದು ವಾರದಿಂದ ಪಟ್ಟಣದ ಪ್ರಮುಖ ಬೀದಿಗಳನ್ನು ದೀಪಾಲಂಕಾರ ಮಾಡಲಾಗಿತ್ತು. ಪಟ್ಟಣದ ದಂಡೂರು ಬಾಗಿಲು, ದಂಡಿನ ಮಾರಮ್ಮ ದೇವಿ ಹೆಬ್ಬಾಗಿಲು, ದೇವಾಲಯ, ರಸ್ತೆ, ವೃತ್ತ, ಸರ್ಕಾರಿ ಕಚೇರಿ, ಇತರ ದೇವಾಲಯ ಹಾಗೂ ಚೋಳೇನಹಳ್ಳಿ ಕೆರೆಗಳಲ್ಲಿ ವಿದ್ಯುತ್​ ದೀಪಾಲಂಕಾರ ಗಮನ ಸೆಳೆಯಿತು. ಕೆರೆ ನೀರಿನಲ್ಲಿ ಎರಡು ತೇಲುವ ವೇದಿಕೆ ಹಾಗೂ ಕೋಡಿಯಲ್ಲಿ ಬೃಹತ್​ ವೇದಿಕೆ ನಿರ್ಮಿಸಿ, ಕೆರೆ ಏರಿ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತ ವಿದ್ಯುತ್​ ದೀಪಾಲಂಕಾರ ಮಾಡಲಾಗಿತ್ತು.

ಶುಕ್ರವಾರ ಬೆಳಗ್ಗೆ 11ಕ್ಕೆ ಪಟ್ಟಣದ ಖಾಸಗಿ ಬಸ್​ ನಿಲ್ದಾಣದ ಸಮೀಪ ಇರುವ ಕಾಳಿಕಾ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ದಂಡಿನ ಮಾರಮ್ಮ ದೇವಿ ಉತ್ಸವಮೂರ್ತಿಯ ಮೆರವಣಿಗೆ ದೇವಾಲಯದಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವದೊಂದಿಗೆ ಕೆರೆಯ ಬಳಿಗೆ ಕರೆತರಲಾಯಿತು. ಪೂರ್ಣಕುಂಭ, ಬಾಳೆಕಂದು, ಮಾವಿನ ಸೊಪ್ಪು ಹಸಿರು ತೋರಣದ ಜತೆಗೆ ರಸ್ತೆ ಉದ್ದಕ್ಕೂ ರಂಗೋಲಿಯ ಚಿತ್ತಾರ ಬಿಡಿಸಲಾಗಿತ್ತು. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಗಮನ ಸೆಳೆದವು. ದಂಡಿನ ಮಾರಮ್ಮ ದೇವಾಲಯದ ಆವರಣದಲ್ಲಿ ಬೃಹತ್​ ಎಲ್​ಇಡಿ ವ್ಯವಸ್ಥೆ ಮಾಡಿ ಆರು ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿತ್ತು.

ಜನರ ಮನಸ್ಸಿನಲ್ಲಿ ಉಳಿಯುತ್ತದೆ: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 50 ವರ್ಷಗಳ ನಂತರ ಮಧುಗಿರಿ ಶ್ರೀ ದಂಡಿನ ಮಾರಮ್ಮನ ತೆಪ್ಪೋತ್ಸವ ಆಚರಣೆ ಮೂಲಕ ಕೆ.ಎನ್​.ರಾಜಣ್ಣ ಮತ್ತು ರಾಜೇಂದ್ರ ರಾಜಣ್ಣ ಇತಿಹಾಸ ನಿಮಾರ್ಣ ಮಾಡಿದ್ದಾರೆ. ಇಂತಹ ಕಾರ್ಯಗಳಿಂದ ಜನರಲ್ಲಿ ಭಕ್ತಿ ಭಾವನೆ ಹೆಚ್ಚಿಸಿದೆ. ಇಂತಹ ಕಾರ್ಯಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು. ಇದೊಂದು ಪುಣ್ಯದ ಕಾರ್ಯ, ಇಂದು ಇಡೀ ಜಗತ್ತು ಕುಂಭಮೇಳ ನೋಡುತ್ತಿದ್ದು, ಕ್ಷೇತ್ರದ ಜನತೆಗೆ ಕುಂಭಮೇಳ ನೋಡಿದಷ್ಟೇ ಅನಂದವಾಗುತ್ತಿದೆ. ಕಾಶಿ ಕ್ಷೇತ್ರದ ಸಂಭ್ರಮವನ್ನು ಇಲ್ಲಿಗೆ ತಂದಿದ್ದು, ನಾವು ಕಾಶಿ ಕ್ಷೇತ್ರದಲ್ಲಿದ್ದೇವೆ ಎಂಬ ವಾತಾವರಣ ನಿಮಾರ್ಣವಾಗಿದೆ ಎಂದು ಸಿದ್ದರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.

ತಾಲೂಕಿನಲ್ಲಿ ಹೊಸ ಚರಿತ್ರೆ ಸೃಷ್ಟಿ: ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಕ್ಷೇತ್ರದಲ್ಲಿ ಯಶಸ್ವಿಯಾಗಿ ತೆಪ್ಪೋತ್ಸವ ಆಯೋಜಿಸಿ ಹೊಸ ಚರಿತ್ರೆ ಸೃಷ್ಟಿಸಿದ್ದಕ್ಕೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಾಶಿಯಲ್ಲಿ ನಡೆಯುವ ಗಂಗಾರತಿಯನ್ನು ಎಲ್ಲರೂ ನೋಡಲು ಸಾಧ್ಯವಿಲ್ಲ. ಆದರೆ, ಇಲ್ಲಿಗೆ ಕಾಶಿಯನ್ನೇ ತರಲಾಗಿದೆ. ಈ ಕಾರ್ಯಕ್ರಮ ಪ್ರತಿವರ್ಷ ನಡೆಯಬೇಕು. ನಮ್ಮ ಸಂಸತಿ, ಹಿಂದು ಸಂಪ್ರದಾಯ ಆಚರಣೆಗಳು ಎಲ್ಲರ ಗಮನ ಸೆಳೆಯುತ್ತಿವೆ. ನಮ್ಮ ಈ ಸಂಪ್ರದಾಯ ಎಲ್ಲರಿಗೂ ತಿಳಿಯಬೇಕು. ನಮ್ಮ ಭಾವನೆಗಳು ಎಲ್ಲರಿಗೂ ತಲುಪಬೇಕು ಎಂದರು.

ಮಧುಗಿರಿ ಜಿಲ್ಲೆಗೆ ಯತ್ನ: ಸಚಿವ ಕೆ.ಎನ್​.ರಾಜಣ್ಣ ಮಾತನಾಡಿ, ನಾವೆಲ್ಲರೂ ನೆಮ್ಮದಿಯಿಂದ ಬದುಕಲು ದಂಡಿನ ಮಾರಮ್ಮನ ಆಶೀರ್ವಾದ ಬೇಕು. ಇದೊಂದು ವಿನೂತನ ಕಾರ್ಯಕ್ರಮ. ಈ ಹಿಂದೆ ಅವಘಡ ಸಂಭವಿಸಿದ್ದರಿಂದ ತೆಪ್ಪೋತ್ಸವ ಸ್ಥಗಿತಗೊಂಡಿತ್ತು ಎನ್ನಲಾಗಿದೆ. 50 ವರ್ಷಗಳ ನಂತರ ಅದ್ದೂರಿಯಾಗಿ ತೆಪ್ಪೋತ್ಸವ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆ ತುಂಬಿದಾಗಲೆಲ್ಲ ತೆಪ್ಪೋತ್ಸವ ಆಚರಣೆ ಮಾಡಲಾ ಗುವುದು. ನಾನು ಮತ್ತು ಪರಂ ಮಧುಗಿರಿ ಜಿಲ್ಲೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net