ದಂಡಗುಂಡದಲ್ಲಿ ಬಸವಣ್ಣನ ರಥೋತ್ಸವ ವೈಭವ

PH 05
Published on

ಚಿತ್ತಾಪುರ: ಶ್ರಾವಣ ನಡುವಿನ ಸೋಮವಾರದ ನಿಮಿತ್ತ ದಂಡಗುಂಡದಲ್ಲಿ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ಶ್ರೀ ಬಸವಣ್ಣನ ರಥೋತ್ಸವ ನಡೆಯಿತು.

ಬೆಳಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಗ್ರಾಮಸ್ಥರು ಬಸವಣ್ಣನಿಗೆ ನೈವೇದ್ಯ ಅರ್ಪಿಸಿದರು. ಸುತ್ತಮುತ್ತಲಿನ ಗ್ರಾಮಗಳ ಜನತೆ ಪಾದಯಾತ್ರೆ ಮೂಲಕ ದೇಗುಲಕ್ಕೆ ಆಗಮಿಸಿ ದರ್ಶನ ಪಡೆದರು. ಸುಮಾರು 3 ಕಿಮೀ ವರೆಗೂ ದರ್ಶನಕ್ಕಾಗಿ ಜನರು ನಿಂತಿದ್ದರು. ಭಕ್ತರಿಗಾಗಿ ದಾರಿಯೂದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳು ಪ್ರಸಾದ ವ್ಯವಸ್ಥೆ ಮಾಡಿದ್ದವು.

ಸಂಜೆ ಕುಂಭ, ಕಳಸ, ಪಲ್ಲಕ್ಕಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಪುರವಂತರ ಆಟಗಳು, ಧರ್ಮದ ಧ್ವಜಗಳು, ಗೀಗೀ ಪದ, ಜಾನಪದ ಕಲಾವಿದರಿಂದ ಭಜನೆ ಗಮನಸೆಳೆದವು. ಸಂಜೆ ದೇವಸ್ಥಾನದ ಆವರಣದಲ್ಲಿ ಶ್ರೀ ಸಂಗನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಪಾರ ಭಕ್ತರು ತೇರನೆಳೆದು ಕೃಥಾರ್ಥರಾದರು. ದಾರಿಯುದಕ್ಕೂ ಶ್ರೀ ದಂಡಗುಂಡ ಬಸರ್ವೇಶ್ವರ ಮಹಾರಾಜ್‌ಕಿ ಜೈ.. ಸೇರಿ ಇನ್ನಿತರ ಘೋಷಣೆ ಮೊಳಗಿದವು. ಭಕ್ತರು ಬಾಳೆಹಣ್ಣು, ಉತ್ತತ್ತಿ(ಕಾರಿಕ) ಎಸೆದು ಭಕ್ತಿ ಸಮರ್ಪಿಸಿದರು.

ಶಾಸಕರಾದ ಡಾ.ಬಿ.ಜಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಮುಖಂಡರಾದ ಭಾಗಣ್ಣಗೌಡ ಸಂಕನೂರ, ಚಂದ್ರಶೇಖರ ಅವಂಟಿ, ಭೀಮರಾಯಗೌಡ ಚಾಮನೂರ, ಭೀಮಣ್ಣ ಸಾಲಿ, ರಾಜಶೇಖರ ಪಾಟೀಲ್ ಸಂಕನೂರ, ಬಸವರಾಜಗೌಡ ಭಾಸರೆಡ್ಡಿ, ಮಹಾಂತಗೌಡ ಪಾಟೀಲ್ ಇತರರಿದ್ದರು. ರಾಜ್ಯ ಸೇರಿ ಆಂಧ್ರ, ಮಹಾರಾಷ್ತç, ತಮಿಳುನಾಡು, ತೆಲಂಗಾಣ ರಾಜ್ಯದಿಂದ ಅಪಾರ ಭಕ್ತರು ಆಗಮಿಸಿದ್ದರು. ಸ್ಥಳೀಯ ಪೊಲೀಸರಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net