

ಮೈಸೂರು: ಅಮೂರ್ತ ಕಲ್ಪನೆಯನ್ನು ಮೂರ್ತ ರೂಪಕ್ಕೆ ಇಳಿಸಿದ ಶ್ರೇಯಸ್ಸು ವರಕವಿ ದ.ರಾ.ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಅಭಿಪ್ರಾಯಪಟ್ಟರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗ, ಕನ್ನಡ ಸಂಘ ಮತ್ತು ಐಕ್ಯೂಎಸಿನಿಂದ ಮಂಗಳವಾರ ಆಯೋಜಿಸಿದ್ದ ದ.ರಾ.ಬೇಂದ್ರೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬೇಂದ್ರೆ ಜೀವನ ಮತ್ತು ಬರಹ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ದ.ರಾ. ಬೇಂದ್ರೆ ಹೆಸರು ಅಜರಾಮರವಾಗಿ ಉಳಿದಿದೆ. ಅಮೂರ್ತವಾಗಿದ್ದನ್ನೂ ಮೂರ್ತ ರೂಪಕ್ಕೆ ಇಳಿಸಿದ ಕೀರ್ತಿ ವರಕವಿಗೆ ಸಲ್ಲುತ್ತದೆ. ಇವರ ಸಾಹಿತ್ಯ ಸೇವೆಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡರು. ಅವರ ಸಾಹಿತ್ಯ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ ಅವರು ಬೇಂದ್ರೆ ಅವರ ಜೀವನ ಕುರಿತು ಮಾತನಾಡಿದರು. ಪ್ರಾಂಶುಪಾಲ ಪ್ರೊ.ಶ್ರೀನಿವಾಸ, ಐಕ್ಯೂಎಸಿ ಡಾ.ಬಿ.ಪಿ.ಅಶ್ವಿನಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿಜಯಲಕ್ಷ್ಮೀ ಇತರರು ಇದ್ದರು.