

ಕೆ.ಎಂ.ದೊಡ್ಡಿ: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವ ಮುನ್ನಾದಿನವಾದ ಬುಧವಾರ ರಾತ್ರಿ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದ ಶಾಂತಿಧಾಮದಲ್ಲಿರುವ ಹಿರಿಯ ಮುತ್ಸದಿ, ಕಾವೇರಿ ಹೋರಾಟಗಾರ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಅಂಬಿ ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ದಿ.ಅಂಬರೀಷ್ ಅವರ ಸಮಾಧಿ ಬಳಿ ತೆರಳಿ ಅಲ್ಲಿಯೂ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಜಿಲ್ಲೆ ನನ್ನ ಕರ್ಮಭೂಮಿಯಾಗಿದೆ. ನಾನು ಹೊರಗಿನವನಲ್ಲ, ಮಂಡ್ಯ ಜಿಲ್ಲೆಯ ಮಗನಿದ್ದಂತೆ. ಎಂದೂ ನಿಮ್ಮ ಸೇವೆಗೆ ಸದಾ ಬದ್ಧನಾಗಿರುತ್ತೇನೆಂದು ಭರವಸೆ ನೀಡಿದರು.
ಈಗಾಗಲೇ ನನ್ನ ಮೇಲೆ ಬಹಳಷ್ಟು ಆರೋಪಗಳನ್ನು ಹೊರಿಸಲಾಗಿದೆ. ಚನ್ನಪಟ್ಟಣ, ರಾಮನಗರ ಎಷ್ಟು ಮುಖ್ಯವೋ ಮಂಡ್ಯ ಜಿಲ್ಲೆ ಕೂಡ ಅಷ್ಟೇ ಮುಖ್ಯ. ಹಾಗಾಗಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ 3 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದ್ದೆ ಎಂದು ಹೇಳಿದರು.
ಜಿಲ್ಲೆಯ ಯಶಸ್ವಿ ಜನನಾಯಕರಾಗಿ ಜನಮಾನಸದಲ್ಲಿ ಉಳಿದಿರುವ ಕೆ.ವಿ.ಶಂಕರೇಗೌಡರು, ಜಿ.ಮಾದೇಗೌಡರು, ಎಚ್.ಕೆ.ವೀರಣ್ಣಗೌಡರು, ಅಂಬರೀಷ್, ಆತ್ಮೀಯರಾಗಿದ್ದ ಎಸ್.ಡಿ.ಜಯರಾಮು, ಕೆ.ಎಸ್.ಪುಟ್ಟಣ್ಣಯ್ಯ ಇವರುಗಳ ಆದರ್ಶವನ್ನು ನಾವೆಂದೂ ಮರೆಯುವುದಿಲ್ಲ. ಅವರು ನಿಮ್ಮ ಮೇಲೆ ಇಟ್ಟಿದ್ದ ಪ್ರೀತಿಯನ್ನು ನಾನು ಮುಂದುವರಿಸಿಕೊಂಡು ಹೋಗಲು ಇಚ್ಛಿಸಿದ್ದೇನೆ. ಹಾಗಾಗಿ ಈ ನಿಮ್ಮ ಮನೆ ಮಗನನ್ನು ಎಂದಿಗೂ ಕೈಬಿಡಬೇಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಸ್ವಾಮಿಗೌಡ, ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಅಣ್ಣೂರು ನವೀನ್, ಗುರುದೇವರಹಳ್ಳಿ ಅರವಿಂದ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಬಿಜೆಪಿ ಮುಖಂಡ ಇಂದ್ರೇಶ್ ಸೇರಿದಂತೆ ಹಲವರಿದ್ದರು.