

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಹೊರಗೆ ಬಂದಿದ್ದಾರೆ.
ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಬಟ್ಟೆ ಹಾಗೂ ಪಾದರಕ್ಷೆ ಮಾರಾಟದ ಅಂಗಡಿಗಳಲ್ಲಿ ಜನ ದಟ್ಟಣೆ ಕಂಡು ಬಂತು. ರಸ್ತೆಗಳಲ್ಲಿ ವಾಹನಗಳ ಓಡಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.ಕೆಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು.
ಖಾಸಗಿ ಕಚೇರಿಗಳು, ಮಳಿಗೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಅಲ್ಲಿ ಕೆಲಸ ಮಾಡುವವರು ಕೂಡಾ ಬೇಗನೆ ಬಂದು ಅಂಗಡಿ ಶುಚಿಗೊಳಿಸಿ, ಕರ್ತವ್ಯ ಆರಂಭಿಸಿದರು. ದೂರದ ಊರಿಗೆ ಹೋದವರಿಗೆ ಬರಲು ಬಸ್ ವ್ಯವಸ್ಥೆ ಆರಂಭವಾದ ಕಾರಣ ಮತ್ತೆ ಬದುಕು ಕಟ್ಟಿಕೊಳ್ಳಲು ನಗರದ ಕಡೆಗೆ ಮುಖ ಮಾಡಿದ್ದಾರೆ.
ನಗರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದರೂ ಯಾವುದೇ ಬಸ್ ಗಳು ರಸ್ತೆಗೆ ಇಳಿದಿಲ್ಲ. ಸರ್ಕಾರಿ ಬಸ್ ಗಳು ಓಡಾಟ ಆರಂಭಿಸಿವೆ. ಧಾರ್ಮಿಕ ಕೇಂದ್ರಗಳು ಇನ್ನೂ ತೆರೆದುಕೊಂಡಿಲ್ಲ.
ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ ಮೊದಲಾದ ತಾಲೂಕು ಕೇಂದ್ರಗಳಲ್ಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪೇಟೆಯ ಕಡೆಗೆ ಆಗಮಿಸಿದ್ದಾರೆ.