ದ.ಕ.806, ಉಡುಪಿ 561 ಮಂದಿಗೆ ಸೋಂಕು

covid
Published on

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 806 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. 858 ಮಂದಿ ಗುಣವಾಗಿದ್ದಾರೆ.

ಮೃತಪಟ್ಟವರಲ್ಲಿ ಮಂಗಳೂರಿನ ಇಬ್ಬರು, ಬಂಟ್ವಾಳದ ನಾಲ್ವರು ಮತ್ತು ಬೆಳ್ತಂಗಡಿಯ ಮೂವರು ಇದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 78,757 ಮಂದಿ ಕರೊನಾ ಸೋಂಕಿಗೊಳಗಾಗಿದ್ದು, ಈ ಪೈಕಿ 69,914 ಮಂದಿ ಗುಣವಾಗಿದ್ದಾರೆ. ಪ್ರಸ್ತುತ 7906 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 937 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯ 25 ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ನಿವಾಸಿಯೊಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಒಟ್ಟು ದೃಢಪಟ್ಟ ಪ್ರಕರಣಗಳಲ್ಲಿ 44 ಮಂದಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 561 ಮಂದಿಗೆ ಕರೊನಾ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. ಕಾರ್ಕಳದಲ್ಲಿ 85 ವರ್ಷದ ಮಹಿಳೆ, 89 ವರ್ಷದ ಪುರುಷ, ಉಡುಪಿಯಲ್ಲಿ 66 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ 227 ಮಂದಿ ಉಡುಪಿ, 226 ಮಂದಿ ಕುಂದಾಪುರ, 106 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ಇಬ್ಬರು ಹೊರ ಜಿಲ್ಲೆಯವರು. ಇವರಲ್ಲಿ 118 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 9 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 552 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. 585 ಮಂದಿ ಗುಣವಾಗಿದ್ದಾರೆ. 4506 ಸಕ್ರಿಯ ಪ್ರಕರಣಗಳಿವೆ. ಕಪ್ಪು ಶಿಲೀಂಧ್ರ ರೋಗದಿಂದ ಓರ್ವ ಮೃತಪಟ್ಟಿದ್ದು, ಸದ್ಯ 9 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯ 392 ಮಂದಿಯಲ್ಲಿ ಶುಕ್ರವಾರ ಕೋವಿಡ್-19 ದೃಢಪಟ್ಟಿದೆ.

ಕರೊನಾಗೆ ಪ್ರಭಾರ ಮುಖ್ಯ ಶಿಕ್ಷಕ ಬಲಿ: ಸುರತ್ಕಲ್: ಚೇಳಾರು ಸರ್ಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಸುರೇಶ್ ಎಸ್.ಎಂ.(56) ಶುಕ್ರವಾರ ಕರೊನಾಕ್ಕೆ ಬಲಿಯಾಗಿದ್ದಾರೆ. 22 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಜಯಪುರ ಜಿಲ್ಲೆ ಇಂಡಿ ಮೂಲದವರಾದ ಅವರು ಚೇಳಾರು ಎಂಆರ್‌ಪಿಎಲ್ ಕಾಲನಿಯಲ್ಲಿ ನೆಲೆಸಿದ್ದರು. 35 ವರ್ಷಗಳಿಂದ ಚೇಳಾರು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ಪ್ರಸ್ತುತ ಪ್ರಭಾರ ಮುಖ್ಯಶಿಕ್ಷಕರಾಗಿದ್ದರು. ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net