ತ್ವರಿತವಾಗಿ ಸಬ್ಸಿಡಿ ಸೌಲಭ್ಯ ಮಂಜೂರು ಮಾಡಿ

19HSN1
????????????????????????????????????
Published on

ಹಾಸನ: ಬ್ಯಾಂಕ್‌ಗಳು ಸರ್ಕಾರದ ಯೋಜನೆಗಳಿಗಿರುವ ಸಬ್ಸಿಡಿ ಸೌಲಭ್ಯವನ್ನು ತ್ವರಿತವಾಗಿ ಮಂಜೂರು ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲೆಯ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಈಗಿರುವ ಅಲ್ಪ ಸಮಯದಲ್ಲಿ ಸಾರ್ವಜನಿಕರನ್ನು ಅಲೆದಾಡಿಸದೆ ಯೋಜನೆಯಡಿ ಬಂದ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಬ್ಯಾಂಕ್‌ಗಳಲ್ಲಿ ನಿತ್ಯ ಖಾತೆದಾರರ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯಬೇಕು. ಪ್ರತಿದಿನ ಕನಿಷ್ಠ ಸೇವೆ ನೀಡದ ಬ್ಯಾಂಕ್‌ಗಳಿಗೆ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಲೀಡ್ ಬ್ಯಾಂಕ್‌ಗಳ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಜಿ.ವಿ. ಭಟ್ ಮಾತನಾಡಿ, ಎಲ್ಲ ಬ್ಯಾಂಕುಗಳು ಸೇರಿ ಶಾಖಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ತಯಾರಿಸಿದ ಸಾಲ ಯೋಜನೆಯನ್ನು ಕ್ರೋಡೀಕರಿಸಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ತಯಾರಿಸಲಾಗಿದೆ ಎಂದರು.

2020-21ನೇ ಸಾಲಿನಲ್ಲಿ 8911 ಕೋಟಿ ರೂ.ಸಾಲ ವಿತರಣೆಗೆ ತೀರ್ಮಾನಿಸಲಾಗಿದ್ದು, ಆದ್ಯತಾ ಕ್ಷೇತ್ರಕ್ಕೆ 8176.78 ಕೋಟಿ (ಶೇ. 91.75)ರೂ., ಕೃಷಿಗೆ 5242.08 ಕೋಟಿ (ಶೇ. 64.11), ಕೈಗಾರಿಕಾ ವಲಯಕ್ಕೆ 881.43 ಕೋಟಿ (ಶೇ. 10.77), ವ್ಯಾಪಾರ ಹಾಗೂ ಇತರ ಸೇವೆಗಳಿಗೆ 2053.27 (ಶೇ. 25.11) ರೂ. ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್ ಮಾತನಾಡಿ, ರೇಷ್ಮೆ ಇಲಾಖೆಯಡಿ ಇರುವ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿ ಸಬ್ಸಿಡಿ ಸಾಲ ಸೌಲಭ್ಯಗಳನ್ನು ಪಡೆದು ಬೆಳೆ ಬೆಳೆಯಲು ಪ್ರೋತ್ಸಾಹಿಸಿ ಎಂದರು.

ಬ್ಯಾಂಕ್‌ಗಳಲ್ಲಿ ಸಾರ್ವಜನಿಕರಿಗೆ ಕೇವಲ ಹಳೆಯ ಮಾಹಿತಿಯನ್ನೇ ನೀಡದೆ ಮುಂದುವರಿದ ಸೇವೆಗಳು ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಿ ಪಾರದರ್ಶಕತೆ ಪ್ರದರ್ಶಿಸಬೇಕು ಎಂದರು.

2020-21ನೇ ಸಾಲಿನ ಜಿಲ್ಲಾ ಸಾಲ ಯೋಜನೆಯ ಕರಡನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಬಿಡುಗಡೆ ಮಾಡಿದರು.

ಸಭೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ. ಜಗದೀಶ್, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಎಸ್.ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net