

ಗುಂಡ್ಲುಪೇಟೆ: ತಾಲೂಕಿನ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ಆರು ಗಂಟೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡುವಂತೆ ಅರಿಶಿಣ ಬೆಳೆಗಾರರ ಒಕ್ಕೂಟದ ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದೆ.
ಪಟ್ಟಣದ ಸೆಸ್ಕ್ ಕಚೇರಿಗೆ ಸೋಮವಾರ ತೆರಳಿದ ಒಕ್ಕೂಟದ ಪದಾದಿಕಾರಿಗಳು ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಎಇಇ ಕೆ.ಎಂ.ಸಿದ್ದಲಿಂಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅರಿಶಿಣ ಬೆಳೆಗಾರರ ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನ ಕುಮಾರ್ ಮಾತನಾಡಿ, ಸದ್ಯ ಹಗಲಿನ ಮೂರು ಗಂಟೆ ಮತ್ತು ರಾತ್ರಿ ಪಾಳಿಯಲ್ಲಿ ಮಧ್ಯರಾತ್ರಿ 12 ಗಂಟೆಯ ನಂತರ ಮೂರು ಗಂಟೆಗಳ ಕಾಲ ವಿದ್ಯುತ್ ಕೊಡಲಾಗುತ್ತಿದೆ. ತಾಲೂಕು ಬಂಡೀಪುರ ಕಾಡಂಚಿನಲ್ಲಿರುವುದರಿಂದ ವನ್ಯಪ್ರಾಣಿಗಳ ಓಡಾಟ ಹೆಚ್ಚಿರುತ್ತದೆ. ಇದರಿಂದ ರಾತ್ರಿ ರೈತರುಗಳು ಜಮೀನಿಗೆ ಹೋಗಿ ಬೆಳೆಗಳಿಗೆ ನೀರುಣಿಸುವುದು ಭಾರೀ ಸವಾಲಾಗಿದೆ. ಎಷ್ಟೋ ರೈತರು ತಮ್ಮ ಪ್ರಾಣವನ್ನು ಪಣಕಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ರಾತ್ರಿವೇಳೆ ಸರಬರಾಜು ಮಾಡುವ ವಿದ್ಯುತ್ತನ್ನು ಹಗಲಿನಲ್ಲಿಯೇ ಕೊಡುವುದರಿಂದ ಮಾನವ ವನ್ಯಜೀವಿ ಸಂಘರ್ಷವನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ಇನ್ನಾದರೂ ಸೆಸ್ಕ್ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಕುಂದಕೆರೆ ಸಂಪತ್ತು, ಬಸವಣ್ಣ, ಶಿವಕುಮಾರ್, ಶಂಕರಪ್ಪ ಹಾಗೂ ಇತರರು ಇದ್ದರು.