

ಮೈಸೂರು: ರನ್ನ, ಪಂಪ, ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಸಾಹಿತಿ, ವಿದ್ವಾಂಸರು ಕಟ್ಟಿದ ಕನ್ನಡ ಭಾಷೆ ಈಗ ತ್ರಿಶಂಕು ಸ್ಥಿತಿ ತಲುಪಿದೆ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ವಿಷಾದಿಸಿದರು.
ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಕನ್ನಡ ಸಹೃದಯ ಬಳಗದಿಂದ ಸಿಎಫ್‌ಟಿಆರ್‌ಐನ ಚೆಲುವಾಂಬ ಅರಮನೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಸಾಕಷ್ಟು ಸಮೃದ್ಧವಾಗಿ ಬೆಳೆದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪಾಲಕರು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇಂತಹ ಬಹುತೇಕ ಮಕ್ಕಳು ಅತ್ತ ಇಂಗ್ಲಿಷ್ ಅನ್ನು ಕಲಿಯದೆ, ಇತ್ತ ಕನ್ನಡವನ್ನೂ ಓದದ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಮೊಮ್ಮೊಗಳು ಸೇರಿದಂತೆ ಅನೇಕ ಮಕ್ಕಳಿಗೆ ಪ್ರಬಂಧ ಬರೆಯಲು ಹೇಳಿದರೆ ಅವರು ಬರೆದ ಪ್ರಬಂಧವನ್ನು ಸರಿಪಡಿಸಲೇ ಒಂದೆರಡು ಗಂಟೆ ಕಾಲ ಬೇಕಾಗುವ ಪರಿಸ್ಥಿತಿ ಬಂದಿದೆ. ಇದು ಹೀಗೆಯೇ ಮುಂದುವರಿದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ನಾವು ಯಾವುದಾದರೊಂದು ಭಾಷೆಯ ಪರಿಣತಿ ಪಡೆಯುವುದು ಅತ್ಯಗತ್ಯವಾಗಿದೆ. ಇಲ್ಲವಾದಲ್ಲಿ ನಾವು ಸಂವಹನ ತೊಂದರೆಯಾಗಿ ಸಾಧನೆಗೂ ತೊಡಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ದ ಕುವೆಂಪು ಅವರು ಎಂದೂ ಇಂಗ್ಲಿಷ್ ವಿರೋಧಿಸಲಿಲ್ಲ. ಆದರೆ, ಇಂದು ಮಗುವಿನ ಮನಮುಟ್ಟುವ ಮಾತೃಭಾಷೆಯನ್ನು ಬಿಟ್ಟು ಚಿಕ್ಕವಯಸ್ಸಿನಲ್ಲಿಯೇ ಇಂಗ್ಲಿಷ್ ಕಲಿಸುವಂತೆ ಒತ್ತಡ ಹಾಕಲಾಗುತ್ತಿದೆ. ಈ ಬಗ್ಗೆ ಪಾಲಕರು ಗಮನ ನೀಡಬೇಕು. ಕುವೆಂಪು ಅವರ ಆಶಯದಂತೆ ಮಕ್ಕಳಿಗೆ ವಿಧೇಯ, ವಿನಯ, ಸಂಸ್ಕೃತಿ ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.
ಆಧುನಿಕತೆ ಸಾಕಷ್ಟು ಮುಂದುವರಿದಿದ್ದು, ತಂತ್ರಜ್ಞಾನವನ್ನು ಕನ್ನಡದಲ್ಲಿ ತರುವನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸಿಎಫ್‌ಟಿಆರ್‌ಐ ತಂತ್ರಜ್ಞಾನವನ್ನು ಕನ್ನಡದಲ್ಲಿ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಮೈಸೂರು ಅರಸು ಕನ್ನಡ ಸಂಸ್ಕೃತಿ, ಪರಂಪರೆಗೆ ಸಾಕಷ್ಟು ಒತ್ತು ನೀಡಿದ್ದು, ಅವುಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಿಎ್ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಸಿಂಗ್ ಮಾತನಾಡಿ, ಕರ್ನಾಟಕ ಎಲ್ಲ್ಲ ಭಾಷೆಯವರಿಗೂ ನೆಲೆ ನೀಡಿದೆ. ಸಹೃದಯದಿಂದ ಸ್ವಾಗತಿಸುತ್ತದೆ. ನಮ್ಮ ಪೂರ್ವಜರು ಆಂಧ್ರದವರಾಗಿದ್ದರೂ ಅಲ್ಲಿಗೆ ಹೋಗಲು ನಾನು ಅಷ್ಟಾಗಿ ಇಷ್ಟಪಡದೆ ವಾಪಸ್ ಬಂದು ಬಿಡುತ್ತಿದ್ದೆ ಎಂದರು.
ಒಂಟಿಕೊಪ್ಪಲಿನಲ್ಲಿ ಇದ್ದಾಗ ಕುವೆಂಪು ಅವರ ಮನೆ ಬಳಿಯೇ ನಮ್ಮ ಮನೆಯೂ ಇತ್ತು. ಆಗ ಸೈಕಲ್‌ನಲ್ಲಿ ಶಾಲೆ, ಕಾಲೇಜಿಗೆ ಹೋಗವಾಗ ಆರಾಮ ಕುರ್ಚಿಯಲ್ಲಿ ಕುಳಿತು ಪುಸ್ತಕ ಓದುವ, ಇಲ್ಲವೇ ಬರೆಯುವ ಕುವೆಂಪು ಅವರನ್ನು ನೋಡುತ್ತಿದ್ದೆವು. ಆದರೆ ಅವರ ವ್ಯಕ್ತಿತ್ವ, ಮಹತ್ವ ಈಗ ಅರಿವಿಗೆ ಬರುತ್ತಿದೆ ಎಂದು ಹೇಳಿದರು.
ಕನ್ನಡ ಸಹೃದಯ ಬಳಗದ ಅಧ್ಯಕ್ಷ ಆರ್.ಚೇತನಾ, ಕಾರ್ಯದರ್ಶಿ ಕೃಷ್ಣಯ್ಯ ಇದ್ದರು. ಕಾರ್ಯಕ್ರಮದಲ್ಲಿ ಕನ್ನಡ ಗೀತಗಾಯನ ಪ್ರಸ್ತುತ ಪಡಿಸಲಾಯಿತು.