ತ್ರಿವಿಧ ದಾಸೋಹಿ ಪುತ್ಥಳಿ ನಿರ್ಮಾಣ ಮಹತ್ವಾಕಾಂಕ್ಷಿ ಯೋಜನೆ : ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ

3
Published on

ಮಾಗಡಿ: ವೀರಾಪುರ ಗ್ರಾಮದಲ್ಲಿ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ 111 ಅಡಿ ಪುತ್ಥಳಿ ನಿರ್ಮಾಣ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ತುಮಕೂರಿನ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ವೀರಾಪುರ ಗ್ರಾಮದಲ್ಲಿ ಲಿಂಗೈಕ್ಯ ಡಾ.ಶಿವಕುವಾರಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣದ ತಳಪಾಯ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ

ಮಾತನಾಡಿದ ಅವರು, ಲಿಂಗೈಕ್ಯ ಡಾ.ಶಿವಕುವಾರಸ್ವಾಮೀಜಿ ಅವರ ಹುಟ್ಟೂರಿನಲ್ಲಿಯೇ ಶ್ರೀಗಳ ಪುತ್ಥಳಿ ಹಾಗೂ ಗ್ರಾಮದ ಸರ್ವತೋಮುಖ ಅಭಿವೃದ್ದಿ ನಡೆಯುತ್ತಿರುವುದರಿಂದ ರೈತರಿಗೆ, ಪ್ರವಾಸಿಗರಿಗೆ ಅನುಕೂಲ ಹಾಗೂ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ನಿಟ್ಟಿನಲ್ಲಿ ಬೃಹತ್ ಕಾಮಗಾರಿ ನಡೆಯುತ್ತಿದೆ, ಸರ್ಕಾರದ ಈ ಕಾರ್ಯದಿಂದ ಸಂತೋಷವಾಗಿದೆ ಎಂದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಬಿಎಸ್‌ವೈ ಸಿಎಂ ಆಗಿದ್ದಾಗ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಈಗ ಕಾಮಗಾರಿ ಆರಂಭವಾಗುತ್ತಿದ್ದು, ಸಿದ್ದಲಿಂಗ ಸ್ವಾಮೀಜಿಯವರ ಕೋರಿಕೆ ಮೇರೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಆರ್‌ಐಡಿಎಲ್ ನಿಗಮ ಅಧ್ಯಕ್ಷ ಎಂ. ರುದ್ರೇಶ್ ಜತೆ ಕಾಮಗಾರಿ ವೀಕ್ಷಿಸಲಾಗಿದೆ. ಯೋಜನೆ ಪೂರ್ಣಗೊಂಡ ನಂತರ ಈ ಸ್ಥಳ ಸುಂದರ ಧಾರ್ಮಿಕ, ಪ್ರವಾಸಿ ತಾಣವಾಗಲಿದೆ ಎಂದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ಪುತ್ಥಳಿ ನಿರ್ಮಾಣವಾದ ನಂತರ ದೇಶದಾದ್ಯಂತ ಭಕ್ತರು, ಪ್ರವಾಸಿಗರು ಬಂದು ಹೋಗುವ ಪವಿತ್ರ ಕ್ಷೇತ್ರ ಇದಾಗಲಿದೆ. ರಸ್ತೆ ಅಭಿವೃದ್ದಿಗೆ ಹೆಚ್ಚು ಗಮನಹರಿಸಲು ಲೋಕೋಪಯೋಗಿ ಸಚಿವರು ಉತ್ಸುಕರಾಗಿದ್ದಾರೆ. ಕರೊನಾದಿಂದಾಗಿ ಎರಡು ವರ್ಷದಿಂದ ನಿರ್ವಾಣದ ಕಾಮಗಾರಿ ಕುಂಠಿತಗೊಂಡಿದೆ. ಶ್ರೀಗಳ ಕನಸಿನಂತೆ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

ಕಂಚುಗಲ್ಲು ಬಂಡೇಮಠದ ಬಸವಲಿಂಗ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಎಂಆರ್‌ಡಿಎ ಅಧ್ಯಕ್ಷ ಡಾ.ರಂಗಧಾಮಯ್ಯ, ವೀರಶೈವ ಸಮಾಜದ ಅಧ್ಯಕ್ಷ ಶಿವರುದ್ರಯ್ಯ, ಡೇರಿ ಅಧ್ಯಕ್ಷ ಮಂಜುನಾಥ್, ಬಿಎಂಟಿಸಿ ನಿರ್ದೆಶಕ ಕೆ.ಪಿ. ಬೃಂಗೇಶ್, ಬಿಬಿಎಂಪಿ ವಿರೋಧಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು, ಕನಕಪುರ ಬಿಎಂಆರ್‌ಡಿಎ ಅಧ್ಯಕ್ಷ ಜಗನ್‌ನಾಥ್, ಚನ್ನಪಟ್ಟಣ ಮಲವೇಗೌಡ, ಮುರುಳಿದರ್. ಪುರಸಭಾ ಸದಸ್ಯರಾದ ಶಿವರುದ್ರಮ್ಮ ವಿಜಯ್ ಕುಮಾರು, ಭಾಗ್ಯಮ್ಮ, ಎಂ.ಆರ್. ರಾವೇಂದ್ರ ಇತರರು ಇದ್ದರು.

ನಾಯಕರ ತೀರ್ಮಾನದಂತೆ ಸ್ಪರ್ಧೆ: ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ಮುಖಂಡರು ತಿರ್ವಾನಿಸುತ್ತಾರೆ. ಉಪಾಧ್ಯಕ್ಷನಾಗಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಪಕ್ಷ ಸಂಟನೆ ಮಾಡುತ್ತಿದ್ದೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಸಮವಸ ವಿಚಾರದಲ್ಲಿ ಧರ್ಮ ಬರಬಾರದು: ಹಿಜಾಬ್-ಕೇಸರಿ ಶಾಲು ವಿವಾದ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಶಾಲಾ, ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿರುವ ವೇಳೆ ಇಂತಹ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ. ವಿದ್ಯಾರ್ಥಿಗಳ ಮನಸ್ಸನ್ನು ಹಾಳು ಮಾಡುವುದು, ಪ್ರಚೋದಿಸುವುದು ಸರಿಯಲ್ಲ. ಸಮವಸ್ತ್ರ ವಿಚಾರ ಗಂಭೀರವಾದ ವಿಷಯ. ಸಮವಸ್ತ್ರ ವಿಚಾರದಲ್ಲಿ ರಾಜಕೀಯ, ಬಣ್ಣ ಕಟ್ಟುವುದು, ಧರ್ಮದ ವಿಚಾರ ಬರಬಾರದು. ಎಲ್ಲ ಮಕ್ಕಳು ಸರಿಸವಾನರಾಗಿ ಶಿಕ್ಷಣ ಕಲಿಯಬೇಕೆಂಬುದು ಸದುದ್ದೇಶ. ಆದರೆ, ಇದರ ವಿರುದ್ದ ಚರ್ಚೆ ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಮಕ್ಕಳನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಇದರಲ್ಲಿ ರಾಜಕೀಯ ಬೆರೆಸುವ ಕೆಲಸವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ನ್ಯಾಯಾಲಯ ತೀರ್ಪು ನೀಡಲಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಪಾರಂಪರಿಕ ತಾಣವಾಗಲಿದೆ: ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಹಲವಾರು ಸಮಸ್ಯೆಗಳಿಂದಾಗಿ ಪುತ್ಥಳಿ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಇಂದು ತಳಪಾಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವೀರಾಪುರ ಗ್ರಾಮ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಲಿದ್ದು, ಪಾರಂಪರಿಕ ಪ್ರವಾಸಿ ತಾಣವಾಗಲಿದೆ. ಇದಕ್ಕೆ ಸರಕಾರ ಹೆಚ್ಚು ಒತ್ತು ನೀಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net