ತ್ರಿವಿಧ ದಾಸೋಹವೇ ನಿಜ ಧರ್ಮ

Dharmika
Published on

ಚಿತ್ರದುರ್ಗ: ಹಸಿದವರಿಗೆ ಅನ್ನ, ದಣಿದವರಿಗೆ ನೀರು, ಬಿಸಿಲಿನಿಂದ ಬಳಲಿದವರಿಗೆ ನೆರಳು ಈ ಮೂರು ತ್ರಿವಿಧ ದಾಸೋಹಕ್ಕೆ ಆದ್ಯತೆ ನೀಡುವುದೇ ನಿಜವಾದ ಧರ್ಮವೆಂದು ಲಕ್ಷ್ಮೇಶ್ವರ ಕರೇವಾಡಿ ಮಠದ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಉಜ್ಜಯನಿ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಲಿಂ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ವರ್ಷದ ಪುಣ್ಯ ಸ್ಮರಣೋತ್ಸವದ ಜನಜಾಗೃತಿ, ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದರು.

ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಪುಣ್ಯದ ಕೆಲಸವಾಗಿದೆ. ಮರುಳಾರಾಧ್ಯ ಶ್ರೀಗಳು ತಮ್ಮ ಜೀವನವನ್ನೇ ಈ ಮಠಕ್ಕೆ ಸವೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪಟ್ಟಕ್ಕೇರಿ, ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಿದ್ದಾರೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು.

ನೇತೃತ್ವ ವಹಿಸಿದ್ದ ಬೀದರ್ ಜಿಲ್ಲೆ ಎಣುಕಲ್ಲುಗಡ್ಡೆ ವೀರಭದ್ರ ಸ್ವಾಮೀಜಿ ಮಾತನಾಡಿ, ಗಂಡುಮೆಟ್ಟಿನ ನಾಡು ಚಿತ್ರದುರ್ಗಕ್ಕೆ ದೇಶ, ವಿದೇಶದಲ್ಲಿ ಹೆಸರಿದೆ. ರಾಜವೀರ ಮದಕರಿನಾಯಕ, ವೀರವನಿತೆ ಒನಕೆ ಓಬವ್ವ ಅವರಂಥ ಮಹನೀಯರ ಶೌರ್ಯ ಪರಾಕ್ರಮದಿಂದಲೂ ಖ್ಯಾತಿ ಪಡೆದಿದೆ ಎಂದರು.

ಭವ್ಯ ಇತಿಹಾಸ ಹೊಂದಿರುವ ಇಲ್ಲಿ ವಿವಿಧ ಮಠಗಳಿವೆ. ಅದರಲ್ಲಿ ಉಜ್ಜಯನಿ ಪೀಠ ವಿದ್ವತ್ತಿನ ಕೇಂದ್ರವಾಗಿದೆ. ಇಲ್ಲಿ ಅಭ್ಯಾಸ ಮಾಡಿದವರು ಉನ್ನತ ಸ್ಥಾನದಲ್ಲಿದ್ದಾರೆ. ಇದು ಭಕ್ತರ ಬೀಡಾಗಿದೆ ಎಂದು ಹೇಳಿದರು.

ಬ್ರಾಹ್ಮೀ ಮುಹೂರ್ತದಲ್ಲಿ ವಟುಗಳಿಗೆ ಲಿಂಗ ದೀಕ್ಷಾ ಕಾರ್ಯಕ್ರಮ ನಡೆಯಿತು. ನಂತರ ಲಿಂ. ಶ್ರೀಗಳ ಕರ್ತೃ ಗದ್ದುಗೆಗೆ ಹಾಗೂ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು. 108 ಮುತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು ಡಾ.ವೀರೇಶ್ ಹಿರೇಮಠ ನಡೆಸಿಕೊಟ್ಟರು.

ಉಜ್ಜಯನಿ ಮಠದ ನಿಯೋಜಿತ ಉತ್ತರಾಧಿಕಾರಿ ಅಭೀಷೇಕ ದೇವರು, ಕಾರ್ಯದರ್ಶಿ ಯು.ಎಂ.ಆರ್. ಈಶ್ವರ ಪ್ರಸಾದ್, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಯ್ಯ, ವಕೀಲ ಕೆ.ಎನ್.ವಿಶ್ವನಾಥಯ್ಯ, ಗಂಜಿಗಟ್ಟೆ ಕೃಷ್ಣಮೂರ್ತಿ, ಜಗನ್ನಾಥ್, ಆಶಾ ಸುದರ್ಶನ, ಶಿಲ್ಪಾ, ಜಲಜಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net