ತ್ಯಾಮಗೊಂಡ್ಲಲ್ಲಿ ಅಕ್ರಮಗಳಿಗೆ ಬ್ರೇಕ್, ಗ್ರಾಮಕ್ಕೆ ಭೇಟಿ ನೀಡಿದ್ದ ಜಿಪಂ ಸಿಇಒ ರವಿಕುಮಾರ್, ಗ್ರಾಪಂ ಕಟ್ಟಡ ಬಿಟ್ಟುಕೊಡದ ಗುತ್ತಿಗೆದಾರನಿಗೆ ತರಾಟೆ

photo tgl 1(1672021) ceo visit tgl raja kaluve
Published on

ತ್ಯಾಮಗೊಂಡ್ಲು: ಕಟ್ಟಡ ಕಾಮಗಾರಿ ಪೂರ್ಣಗೊಂಡು, ಸರ್ಕಾರದಿಂದ ಹಣ ಪಾವತಿಯಾಗಿದ್ದರೂ ತ್ಯಾಮಗೊಂಡ್ಲು ಗ್ರಾಪಂ ಕಾರ್ಯಾಲಯವನ್ನು ಬಿಟ್ಟುಕೊಡದ ಗುತ್ತಿಗೆದಾರನ ವಿರುದ್ಧ ಜಿಪಂ ಸಿಇಒ ರವಿಕುಮಾರ್ ಹರಿಹಾಯ್ದಿದ್ದಾರೆ. ಬಾಕಿ ಇರುವ ಕೆಲಸಗಳನ್ನು ಶೀಘ್ರದಲ್ಲಿ ಮುಗಿಸಿ, ಕಟ್ಟಡ ಹಸ್ತಾಂತರಿಸುವಂತೆ ಗುತ್ತಿಗೆದಾರನಿಂದ ಮುಚ್ಚಳಿಕೆ ಪತ್ರ ಪಡೆದುಕೊಂಡರು.

ತ್ಯಾಮಗೊಂಡ್ಲು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಸದಸ್ಯ ಎಚ್.ವೆಂಕಟೇಶ್ ದೊಡ್ಡೇರಿ ಮತ್ತು ಮುಖಂಡರಾದ ಟಿ.ಎನ್. ಹನುಮಂತರಾಜು, ಮಹಿಮಣ್ಣ ಅವರು ಗುರುವಾರ ಸಿಇಒ ರವಿಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಹಾಗೆಯೇ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಲವು ಅಕ್ರಮಗಳ ಕುರಿತು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ತ್ಯಾಮಗೊಂಡ್ಲು ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.

ತ್ಯಾಮಗೊಂಡ್ಲು ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಇದ್ದು, ಅವುಗಳ ಬಗ್ಗೆ ಸಾರ್ವಜನಿಕರು ಸಾಕಷ್ಟು ದೂರು ಸಲ್ಲಿಸಿದ್ದಾರೆ. ಆದರೂ, ಅವನ್ನು ಪರಿಹರಿಸುವ ಬಗ್ಗೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ಅನುಸರಿಸುತ್ತಿದ್ದಾರೆ ಎಂದು ಅಧಿಕಾರಿಗಳನ್ನು ಸಿಇಒ ತರಾಟೆ ತೆಗೆದುಕೊಂಡರು.

ಅಕ್ರಮಗಳ ಸರಮಾಲೆ: ತ್ಯಾಮಗೊಂಡ್ಲು ಪಟ್ಟಣದ ರಾಜಕಾಲುವೆ ಮೇಲೆ ಅಂಗಡಿಗಳ ಸಾಲು ನಿರ್ಮಿಸಿ, ನಾಲ್ಕು ದಶಕದಿಂದಲೂ ವ್ಯಾಪಾರ ಮಾಡಲಾಗುತ್ತಿದೆ. ಆದ್ದರಿಂದ ರಾಜಕಾಲುವೆ ಒತ್ತುವರಿ ತಕ್ಷಣವೇ ತೆರವುಗೊಳಿಸಬೇಕು. ದೇವಸ್ಥಾನದ ಇನಾಮ್ತಿ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗಿದೆ. ಅಲ್ಲದೆ, ಸರ್ಕಾರಿ ಜಾಗದಲ್ಲಿದ್ದ ಎರಡು ತೆರೆದ ಬಾವಿಗಳನ್ನು ಪ್ರಭಾವಿ ವ್ಯಕ್ತಿಯೊಬ್ಬರು ಮುಚ್ಚಿಸಿದ್ದಾರೆ. 1985ರಲ್ಲಿ ಜಿಪಂನಿಂದ ಕೊರೆಸಿದ್ದ ಕೊಳವೆಬಾವಿಯನ್ನೂ ಮುಚ್ಚಿಸಲಾಗಿದೆ. ರೆಸ್ತೆಗೆ ಗೇಟ್ ಹಾಕಿಕೊಂಡು ಕೆಲವರು ಸ್ವಂತ ಜಾಗದಂತೆ ಬಳಸುತ್ತಿದ್ದಾರೆ ಎಂದು ಜಿಪಂ ಸಿಇಒ ಎದುರು ಗ್ರಾಮಸ್ಥರು ಅಕ್ರಮಗಳ ಸರಮಾಲೆಯನ್ನೇ ಹರವಿದರು.

ಗ್ರಾಮ ಪಂಚಾಯಿತಿಯ ಮಳಿಗೆಗಳನ್ನು ಎರಡು ದಶಕದಿಂದ ಹರಾಜು ಹಾಕಿಲ್ಲ. ಇದರಿಂದ, ಗ್ರಾಪಂಗೆ ಆದಾಯ ನಷ್ಟವಾಗುತ್ತಿದೆ. ಈ ಹಿಂದಿನಿಂದಲೂ ಕೇವಲ 300 ರೂ. ಬಾಡಿಗೆ ನಿಗದಿಯಾಗಿದ್ದರೂ ಮಳಿಗೆಗಳ ಮಾಲೀಕರು ಈ ಮೊತ್ತವನ್ನೂ ಪಾವತಿಸದೆ, ಉಪಬಾಡಿಗೆ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಸ್ಥಳ ಪರಿಶೀಲನೆ: ದೂರುಗಳ ಪಟ್ಟಿ ಹಿಡಿದ ಸಿಇಒ ರವಿಕುಮಾರ್ ಅವರು ತಹಸೀಲ್ದಾರ್ ಕೆ.ಮಂಜುನಾಥ್, ಇಒ ಎಲ್. ಮೋಹನ್‌ಕುಮಾರ್ ಅವರ ಜತೆಗೂಡಿ ಎಲ್ಲ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲ ಕಡೆಯಲ್ಲೂ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಯಿತು. ಈ ಹಿನ್ನೆಲೆಯಲ್ಲಿ ಮೂಲ ದಾಖಲೆಗಳು, ಪಹಣಿ ಪಡೆದು ಸಲ್ಲಿಸುವಂತೆ ಪಿಡಿಒ ರೇಖಾ ಮತ್ತು ಆರ್‌ಐ ಮಹೇಶ್‌ಕುಮಾರ್ ಅವರಿಗೆ ಸೂಚಿಸಿದರು. ರಾಜಕಾಲುವೆ ಅತಿಕ್ರಮಣವನ್ನು ತಕ್ಷಣವೇ ತೆರವುಗೊಳಿಸಬೇಕು. ಯಾರು ಕೊಳವೆಬಾವಿ ಮುಚ್ಚಿಸಿದ್ದಾರೋ, ಅವರ ಹಣದಲ್ಲೇ ಹೊಸದಾಗಿ ಕೊಳವೆಬಾವಿ ಕೊರೆಸುವಂತೆ ಹೇಳಿದರು.

ಅಧಿಕಾರಿಗಳಿಗೆ ನೋಟಿಸ್ ಜಾರಿ: ಗ್ರಾಮ ಪಂಚಾಯಿತಿ ಮಳಿಗೆಗಳನ್ನು ಇಷ್ಟು ದಿನವಾದರೂ ಹರಾಜು ಮಾಡದಿರುವುದಕ್ಕೆ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಗ್ರಾಪಂ ಸದಸ್ಯರಾಗಿದ್ದವರು ಮತ್ತು ಅವರ ಸಂಬಂಧಿಕರು ಅಕ್ರಮವಾಗಿ ಅಂಗಡಿ ಪಡೆದುಕೊಂಡಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಹೇಳಿದರು.

ತಾಪಂ ಸಹಾಯಕ ನಿರ್ದೇಶಕ ಡಿ. ಪದ್ಮನಾಭ, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಗುರುಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್. ಹನುಮಂತರಾಜು, ಮಾಜಿ ಉಪಾಧ್ಯಕ್ಷ ಜಗದೀಶ್ ಪ್ರಸಾದ್, ಮಾಜಿ ಸದಸ್ಯರಾದ ಮಲ್ಲೇಶ್, ಪಿ.ಎನ್. ಸುಜಿತ್‌ಕುಮಾರ್, ಜಿಪಂ ಮಾಜಿ ಸದಸ್ಯರಾದ ಕುಮಾರಸ್ವಾಮಿ ಮೊದಲಿಯಾರ್, ಮಹಿಮಣ್ಣ, ಛಲವಾದಿ ಸಂಘದ ಅಧ್ಯಕ್ಷ ದೊಡ್ಡರಾಜು ಮತ್ತಿತರರಿದ್ದರು.

ತ್ಯಾಮಗೊಂಡ್ಲು ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿ ಅವರು ಅರ್ಜಿ ಪರಿಶೀಲಿಸಲು ಸೂಚಿಸಿದ್ದಾರೆ. ಈ ಗ್ರಾಪಂಗೆ ಯಾವ್ಯಾವ ಗ್ರಾಮಗಳನ್ನು ಸೇರಿಸಿ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬಹುದು ಎಂಬ ಮಾಹಿತಿ ಪಡೆದು, ಇನ್ನೊಂದು ವಾರದೊಳಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ರವಿಕುಮಾರ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net