ತ್ಯಾಜ್ಯ ಸೇರ್ಪಡೆಯಿಂದ ಕಪ್ಪಾದ ಕೆರೆ ನೀರು, ವಿನಾಶದ ಅಂಚಿನಲ್ಲಿ ದೊಡ್ಡತುಮಕೂರು ಕೆರೆ, ಹೋರಾಟಕ್ಕೆ ಗ್ರಾಮಸ್ಥರು ಸಜ್ಜು

16dbp1
Published on

ರಾಜೇಶ್ ಎಸ್.ಜಿ.ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ

ಜೀವಜಲಕ್ಕೆ ಆಶ್ರಯವಾಗಿದ್ದ ದೊಡ್ಡತುಮಕೂರು ಕೆರೆಗೆ ರಾಸಾಯನಿಕ ತ್ಯಾಜ್ಯ ಹರಿಸುತ್ತಿರುವುದರಿಂದ ನೀರು ಕಪ್ಪಾಗುತ್ತಿದೆ. ಇದರಿಂದಾಗಿ ಕೆರೆ ವಿನಾಶದ ಅಂಚು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆ ಉಳಿಸಿಕೊಳ್ಳಲು ನಿರ್ಧರಿಸಿರುವ ದೊಡ್ಡತುಮಕೂರು ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ನಗರಸಭೆಯು ಕೆರೆಗೆ ಹೊಂದಿಕೊಂಡಂತೆ ಒಳಚರಂಡಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿದೆ. ಈ ಘಟಕದಲ್ಲಿ ಅವೈಜ್ಞಾನಿಕವಾಗಿ ನೀರು ಸಂಸ್ಕರಿಸಿ, ಕೆರೆಗೆ ಹರಿಸಲಾಗುತ್ತಿದೆ. ಆದರೆ, ತ್ಯಾಜ್ಯ ನೇರವಾಗಿ ಕೆರೆ ಒಡಲು ಸೇರುತ್ತಿದೆ. ಈ ಕೆರೆ ತುಂಬಿ ಕೋಡಿ ಬಿದ್ದು ದೊಡ್ಡತುಮಕೂರು ಕೆರೆಗೂ ಕೊಳಕು ನೀರು ಸೇರ್ಪಡೆಗೊಳ್ಳುತ್ತಿದೆ. ಇದರಿಂದ ಕೆರೆಯ ನೀರು ವಿಷಮಯವಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ಆಧುನಿಕ ಮಾದರಿಯಲ್ಲಿ ಶುದ್ಧೀಕರಿಸಿ: ಅವೈಜ್ಞಾನಿಕವಾಗಿ ಶುದ್ಧೀಕರಿಸುತ್ತಿರುವುದರಿಂದ, ನೀರು ಸ್ವಚ್ಛವಾಗುತ್ತಿಲ್ಲ. ವೈಜ್ಞಾನಿಕವಾಗಿ ನೀರು ಶುದ್ಧೀಕರಿಸಿ ಕೆರೆಗೆ ಹರಿಸಬೇಕು. ಇಲ್ಲವಾದಲ್ಲಿ ಈ ನೀರನ್ನು ಕೆರೆಯ ಬದಲು ಎಲ್ಲಿಗಾದರೂ ಹರಿಸಿಕೊಳ್ಳಿ ಎಂದು ಗ್ರಾಮಸ್ಥರು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕೆರೆಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳೇ ಉರುಳು: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕೈಗಾರಿಕೆಗಳು ಇವೆ. ಈ ಘಟಕಗಳು ಉತ್ಪಾದನೆಯಾಗುವ ರಾಸಾಯನಿಕ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ನೇರವಾಗಿ ಕೆರೆಗೆ ಹರಿಸುತ್ತಿವೆ. ಇದು ಕೆರೆಯ ಪಾಲಿಗೆ ಉರುಳಾಗಿದೆ ಎನ್ನಲಾಗಿದೆ.

ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ: ದೊಡ್ಡ ಕೈಗಾರಿಕೆಗಳು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿಕೊಂಡಿಲ್ಲ. ವಿಷಯಕ್ತ ತ್ಯಾಜ್ಯವನ್ನು ಕಾಲುವೆಗಳಿಗೆ ಹರಿಬಿಡುತ್ತಿವೆ. ಇದರ ಪರಿಣಾಮ ಕೊಳವೆಬಾವಿಗಳಲ್ಲೂ ವಿಷಪೂರಿತ ನೀರು ಬರುತ್ತಿದೆ. ಈ ನೀರನ್ನು ಬಳಸುವುದರಿಂದ ಜನ, ಜಾನುವಾರುಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಮಾಲಿನ್ಯ ನಿಯಂತ್ರಣ ಮಂಡಳಿ, ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net