ತ್ಯಾಜ್ಯ ಸಂಗ್ರಹ ತಾಣವಾದ ಕಂದಕಗಳು

12blrp1
Published on

ಹಾಸನ: ಇತ್ತೀಚಿನ ದಿನಗಳಲ್ಲಿ ಐತಿಹಾಸಿಕ ಕುರುಹುಗಳಾದ ಕಂದಕಗಳು ಒತ್ತುವರಿಯಾಗುವುದರ ಜತೆಗೆ ಕಸ ಸಂಗ್ರಹ ತಾಣವಾಗುತ್ತಿವೆ. ಇವುಗಳನ್ನು ಉಳಿಸಲು ಸಂಘ ಸಂಸ್ಥೆಗಳು ಮುಂದಾಗಬೇಕಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಮುಖ್ಯಸ್ಥೆ ಸೌಭಾಗ್ಯ ಅಂತೋಣಿ ಮನವಿ ಮಾಡಿದರು.

ಬೇಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ವೀರಶೈವ ಮಹಿಳಾ ಘಟಕದಿಂದ ಆಯೋಜಿಸಿದ್ದ ಮಾಸಿಕ ಸಭೆಯ್ಲಲಿ ಮಾತನಾಡಿದ ಅವರು, ಬೇಲೂರಿನ ದೇವಸ್ಥಾನದ ಸುತ್ತಲೂ ನಿರ್ಮಿಸಿದ್ದ ಕಂದಕಗಳು ಮಾಯವಾಗುತ್ತಿವೆ. ಇವುಗಳನ್ನು ಉಳಿಸುವುದಕ್ಕಾಗಿ ವಿವಿಧ ಸಂಘಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕಂದಕಗಳಿರುವ ಸ್ಥಳದಲ್ಲಿ ಸಾರ್ವಜನಿಕರು ಕಸ ತಂದು ಹಾಕುತ್ತಿದ್ದು, ಅನೈರ್ಮಲ್ಯಕ್ಕೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ವೀರಶೈವ ಮಹಿಳಾ ಘಟಕದಿಂದ ಹೆಚ್ಚು ಸಾಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಲು ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಚಂದ್ರಕಲಾ ಮಾತನಾಡಿ, ವೀರಶೈವ ಮಹಿಳಾ ಘಟಕ ಬೇಲೂರಿನಲ್ಲಿ ಕ್ರೀಯಾಶೀಲಗೊಂಡು ಜನಪರ ಮತ್ತು ಸೇವಾ ಕಾರ್ಯಗಳಿಗೆ ಒತ್ತು ನೀಡಬೇಕು. ಆಗ ಮಾತ್ರ ಸಂಘಕ್ಕೆ ಉತ್ತಮ ಹೆಸರು ಬರುತ್ತದೆ ಎಂದರು.
ತಾಲೂಕು ಘಟಕದ ಅಧ್ಯಕ್ಷೆ ಚಂದ್ರಕಲಾ, ಅನ್ನಪೂರ್ಣ ಮಾತನಾಡಿದರು. ವೀರಶೈವ ಲಿಂಗಾಯತ ಮಹಿಳಾ ಘಟಕದ ಕಾರ್ಯದರ್ಶಿ ಹೇಮಾ, ಖಜಾಂಚಿ ಗೌರಮ್ಮ, ಪದಾಧಿಕಾರಿಗಳಾದ ಪ್ರೇಮಾಲೀಲಾ, ಯಶೋಧರಿ, ಗೀತಾ, ವಿನುತಾ, ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net