ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ

7-RNR-01
Published on

ರಾಣೆಬೆನ್ನೂರ: ಕೋರ್ಟ್ ಹಿಂಭಾಗದ ಎಕೆಜಿ ಕಾಲನಿ ಹಾಗೂ ದುರ್ಗಾ ವೃತ್ತ ಗಬ್ಬೆದ್ದಿದೆ. ನಗರಸಭೆ ವ್ಯಾಜ್ಯ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ಮಾಡದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ತಾಲೂಕು ಕೋರ್ಟ್ ಕಾಂಪೌಂಡ್​ಗೆ ಹೊಂದಿಕೊಂಡು ಎಕೆಜಿ ಕಾಲನಿಯ ಮುಖ್ಯರಸ್ತೆಯಲ್ಲಿ ಕಸ ಎಸೆಯಲು ಸ್ಥಳಾವಕಾಶ ಮಾಡಲಾಗಿದೆ. ಆದರೆ, ಈ ಭಾಗದಲ್ಲಿ ವಾರ ಕಳೆದರೂ ತ್ಯಾಜ್ಯ ವಿಲೇಮಾರಿ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಹಂದಿ, ನಾಯಿಗಳು ಓಡಾಡುತ್ತವೆ. ಹೀಗಾಗಿ, ಮುಖ್ಯರಸ್ತೆಯಲ್ಲಿಯೇ ಕಸ ಎಲ್ಲೆಂದರಲ್ಲಿ ಹರಡಿಕೊಳ್ಳುತ್ತಿದೆ. ಇದರಿಂದಾಗಿ ವಾಹನಗಳು ಓಡಾಡುವಾಗ ಪ್ಲಾಸ್ಟಿಕ್ ಹಾಳೆಗಳು ವಾಹನಗಳ ಚಕ್ರಕ್ಕೆ ಸಿಲುಕಿ ರಸ್ತೆಯುದ್ದಕ್ಕೂ ತ್ಯಾಜ್ಯ ಹರಿದಾಡುತ್ತಿದೆ. ದುರ್ಗಾ ವೃತ್ತದಲ್ಲಿ ಗೋಡೆಗೆ ಹೊಂದಿಕೊಂಡು ತ್ಯಾಜ್ಯ ಎಸೆಯುತ್ತಿದ್ದು, ಪ್ಲಾಸ್ಟಿಕ್ ಅನ್ನು ಅಲ್ಲಿಯೇ ಸುಡಲಾಗುತ್ತಿದೆ. ಇದರಿಂದಾಗಿ ವಿಪರೀತ ಕೊಳಚೆ ಆಗುತ್ತಿದ್ದು, ಹಂದಿಗಳ ವಾಸ ತಾಣವಾಗಿದೆ.

ನಗರಸಭೆ ಸ್ವಚ್ಛತಾ ಸಿಬ್ಬಂದಿ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಕೊಳಚೆ ಸ್ವಚ್ಛಗೊಳಿಸುವಂತೆ ಕೇಳಿಕೊಂಡರೂ ಕ್ಯಾರೇ ಎನ್ನುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ನಾಲ್ಕೈದು ದಿನಕ್ಕೊಂದು ಬಾರಿ ಬರುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

ತ್ಯಾಜ್ಯ ವಿಲೇವಾರಿ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ. ದುರ್ನಾತಕ್ಕೆ ಬೇಸತ್ತು ಹೋಗಿದ್ದೇವೆ. ಮುಂದಿನ ದಿನದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡದಿದ್ದರೆ, ಪ್ರತಿಭಟನೆ ಮಾಡಬೇಕಾಗುತ್ತದೆ. | ಅಲ್ಲಾಬಕ್ಷ, ಸ್ಥಳೀಯ ನಿವಾಸಿ

ಎಕೆಜಿ ಕಾಲನಿ, ದುರ್ಗಾ ವೃತ್ತದಲ್ಲಿ ತ್ಯಾಜ್ಯ ವಿಲೇವಾರಿ ವಿಳಂಬ ಕುರಿತು ಪರಿಸರ ಇಂಜಿನಿಯರ್ ಅವರಿಂದ ಮಾಹಿತಿ ಪಡೆದು, ಕೂಡಲೇ ಸರಿಪಡಿಸಲು ಸೂಚಿಸಲಾಗುವುದು. | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net