ತ್ಯಾಜ್ಯ ವಿಲೇವಾರಿ ಘಟಕಕ್ಕೆ ಲೋಕಾಯುಕ್ತ ಎಸ್‌ಪಿ ದಿಢೀರ್ ಭೇಟಿ

03_HSN_06
Published on

ಹಾಸನ: ನಗರದ ಹಲವೆಡೆ ಹಲವು ರೀತಿಯ ತ್ಯಾಜ್ಯ ವಿಲೇವಾರಿ ಆಗದೆ ಕೆಲವು ಕಡೆಗಳಲ್ಲಿ ಕಸದ ರಾಶಿಯೇ ಬಿದ್ದಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಬಿ.ಎನ್.ನಂದಿನಿ ಅವರು ಗುರುವಾರ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ತಾಲೂಕಿನ ಅಗಿಲೆ ಬಳಿಯ ತ್ಯಾಜ್ಯ ವಿಲೇವಾರಿ ನೆಲಭರ್ತಿ ಘಟಕಕ್ಕೆ ಸಿಬ್ಬಂದಿ ಜತೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಇದಲ್ಲದೆ ನಗರದ ಎಲ್ಲೆಲ್ಲಿ ಕಸ ವಿಲೇವಾರಿ ಆಗದ ಜಾಗಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕಸದ ರಾಶಿ ಕಂಡ ಅಸಮಾಧಾನಗೊಂಡ ಎಸ್ಪಿ ಅವರು, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದ್ದಕ್ಕೆ ನಗರಸಭೆ ಅಧಿಕಾರಿಗಳ ವಿರುದ್ಧ ಗರಂ ಆದರು. ಈ ರೀತಿಯ ನಿರ್ಲಕ್ಷ್ಯ ಮಳೆಗಾಲ ಸಂದರ್ಭದಲ್ಲೂ ಮರುಕಳಿಸಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸರಿಯಾಗಿ ತ್ಯಾಜ್ಯ ವಿಲೇವಾರಿ ಏಕೆ ಮಾಡಿಲ್ಲ? ಏನು ಸಮಸ್ಯೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಲೋಕಾಯುಕ್ತ ಎಸ್ಪಿ, ಇನ್ನು ಮುಂದೆ ಇದು ಮರುಕಳಿಸದಂತೆ ಸೂಕ್ತ ಗಮನ ಹರಿಸಿ ಎಂದು ಸೂಚಿಸಿದರು.

ಈ ವೇಳೆ ನಗರಸಭೆ ಆಯುಕ್ತ ಕೆ.ಎಂ.ರಮೇಶ್, ಆರೋಗ್ಯ ನಿರೀಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net