

ದಾವಣಗೆರೆ: ಆಧುನಿಕ ಜೀವನದಲ್ಲಿ ಕಸದ ಉತ್ಪತ್ತಿ ಪ್ರಮಾಣ ಹೆಚ್ಚಿದೆ. ಇದರ ವಿಲೇವಾರಿಯಲ್ಲಿನ ನಿರ್ಲಕ್ಷ್ಯವು ಮನುಕುಲ ಹಾಗೂ ಜೀವಸಂಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ವಾಗ್ಮಿ ಎಚ್.ಬಿ. ಮಂಜುನಾಥ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್‌ನ ದಾವಣಗೆರೆ ಜಿಲ್ಲಾ ಕಚೇರಿ ವತಿಯಿಂದ ಭೂಮಿಕಾ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಪರಿಸರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜೀವನ ಶೈಲಿಯ ಕೊಳ್ಳುಬಾಕ ಸಂಸ್ಕೃತಿ ಹಾಗೂ ಬಳಸು-ಬಿಸಾಕು ಸಂಸ್ಕೃತಿಯು ಘನ ತ್ಯಾಜ್ಯ, ಕಸಗಳ ಪ್ರಮಾಣವನ್ನು ಹೆಚ್ಚಿಸುತ್ತಿದ್ದು ಇಂತಹ ಕಸಗಳ ಸೂಕ್ತ ವಿಂಗಡಣೆ ಹಾಗೂ ವಿಲೇವಾರಿ ಪ್ರಪಂಚದಾದ್ಯಂತ ಸಮರ್ಪಕವಾಗಿ ಆಗುತ್ತಿಲ್ಲ ಎಂದು ವಿಷಾದಿಸಿದರು.
ನಮ್ಮ ದೇಶದಲ್ಲಿ ವಾರ್ಷಿಕ ಸುಮಾರು 65 ಮಿಲಿಯನ್ ಟನ್ ಕಸ ಉತ್ಪತ್ತಿಯಾಗುತ್ತಿದ್ದು ಇದರಲ್ಲಿ 45 ಮಿಲಿಯನ್ ಟನ್ ಮಾತ್ರ ಸಂಗ್ರಹವಾಗುತ್ತಿದ್ದು ಇದರ ಪೈಕಿ 14 ಮಿಲಿಯನ್ ಟನ್ ಮಾತ್ರವೇ ಸಂಸ್ಕರಿಸಲ್ಪಡುತ್ತಿದೆ. ಉಳಿದ 31 ಮಿಲಿಯನ್ ಟನ್ ಕಸ ಎಲ್ಲೆಂದರಲ್ಲಿ ಎಸೆಯಲ್ಪಡುತ್ತಿದೆ ಎಂದರು.
ವಾರ್ಷಿಕ ನಾಲ್ಕು ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಹೆಚ್ಚಿನ ಪಾಲು ಸಮುದ್ರ ಸೇರುತ್ತಿದೆ, ಅವು ಸೂಕ್ಷ್ಮ್ಮ ಕಣಗಳಾಗಿ ಉಪ್ಪು, ಮೀನಿನ ಆಹಾರಗಳ ಮುಖಾಂತರ ನಮ್ಮ ದೇಹವನ್ನೇ ಸೇರುತ್ತಿದ್ದು ಶ್ವಾಸಕೋಶದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಜತೆಗೆ ಸಾವಿಗೂ ಕಾರಣವಾಗುತ್ತಿದೆ.
ಬಳಸಿ ಬಿಸಾಕಿದ ಪ್ಲಾಸ್ಟಿಕ್ ಸುಡುವಿಕೆಯಿಂದ ಅಪಾಯಕಾರಿ ಡಯಾಕ್ಸಿನ್, ಫ್ಯೂರಿನ್, ಫಿನೈಲ್ ಅನಿಲ ಸಂಯುಕ್ತಗಳು ಹೊಗೆ ರೂಪದಲ್ಲಿ ಗಾಳಿಗೆ ಸೇರಿ ಹೃದ್ರೋಗ, ನರದೌರ್ಬಲ್ಯ, ತಲೆ ನೋವು, ಕಿಡ್ನಿ ವೈಫಲ್ಯ, ನಪುಂಸಕತೆಗೂ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ಲಾಸ್ಟಿಕ್ ಬ್ಯಾಗ್ ಬಳಕೆ ತ್ಯಜಿಸಿ ಬಟ್ಟೆ ಚೀಲ, ಪೇಪರ್ ಕವರ್‌ಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಯೋಜನಾಧಿಕಾರಿ ಬಾಬು ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಪರಿಸರ ನೈರ್ಮಲ್ಯಕ್ಕೂ ಆದ್ಯತೆ ಕೊಡುತ್ತಿದ್ದು ದೇವಸ್ಥಾನ, ಪ್ರಾರ್ಥನಾ ಮಂದಿರಗಳು ಮುಂತಾದ ಪ್ರದೇಶಗಳಲ್ಲಿ ಜಾತಿ ಮತ ಭೇದವಿಲ್ಲದೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಿದೆ. ಈ ಸಾಲಿನಲ್ಲಿ ಗ್ರಾಮಾಂತರ ಪ್ರದೇಶಗಳ 500 ದೇವಾಲಯಗಳ ಪರಿಸರವನ್ನು ಸ್ವಯಂಪ್ರೇರಣೆಯಿಂದ ಸ್ವಚ್ಛಗೊಳಿಸಲಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆಯ ಅಧಿಕಾರಿ ಶ್ರೀಧರ್ ಸಂತೆಬೆನ್ನೂರು, ಜಿಲ್ಲಾ ಜನಜಾಗೃತಿಯ ಅಣಬೇರು ಮಂಜಣ್ಣ, ತಿಮ್ಮಪ್ಪ ಹೊನ್ನಾಳಿ, ಕಮಲಾಕ್ಷಿ, ಸಾಯಿಬಾಬಾ ದೇವಸ್ಥಾನ ಸಮಿತಿಯ ಅರ್ಚನಾ, ರಾಜೇಶ್ವರಿ, ರೂಪಾ ರಾಜೇಶ್ ಇತರರಿದ್ದರು.
---