

ಕಾರವಾರ: ತ್ಯಾಜ್ಯ ವಿಲೇವಾರಿ ತೆರಿಗೆ ಇಳಿಸುವ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಶುಕ್ರವಾರ ಆಯೋಜನೆಯಾಗಿದ್ದ ಸಾಮಾನ್ಯ ಸಭೆಯಲ್ಲಿ ತೀರ್ವನಿಸಲಾಯಿತು.
ಕೋವಿಡ್ ಲಾಕ್ಡೌನ್ನಿಂದ ಜನ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ನಗರದ ಕರವೂ ಹೆಚ್ಚಿದೆ. ವಾರ್ಷಿಕ 180 ರೂಪಾಯಿ ಇದ್ದ ತ್ಯಾಜ್ಯ ವಿಲೇವಾರಿ ಕರವನ್ನು 780 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದು ಜನರಿಗೆ ಹೆಚ್ಚುವರಿ ಹೊರೆಯಾಗಿದೆ. 200 ರೂಪಾಯಿ ನೀರಿನ ಕರ ಪಡೆಯಲಾಗುತ್ತಿದ್ದು, ದಿನಕ್ಕೆ 1 ತಾಸೂ ನೀರು ಬರುತ್ತಿಲ್ಲ. ಜನರ ಹಿತದೃಷ್ಟಿಯಿಂದ ಕರ ಇಳಿಕೆ ಮಾಡಬೇಕು ಎಂದು ಸಂದೀಪ ತಳೇಕರ್, ಪ್ರೇಮಾನಂದ ಗುನಗಾ, ಗಣಪತಿ ನಾಯ್ಕ, ಪಾಂಡುರಂಗ ರೇವಂಡಿಕರ್, ಮಕ್ಬುಲ್ ಶೇಖ್ ಒತ್ತಾಯಿಸಿದರು.
ನಗರದಲ್ಲಿ ಕರ ಸಂಗ್ರಹಣೆ ಯಿಂದಲೇ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದೆ. ಕೋವಿಡ್ ಕಾರಣ ಸರ್ಕಾರದಿಂದ ಬರುವ ಅನುದಾನ ಇಳಿಕೆಯಾಗಿದೆ. ಮೂರು ವರ್ಷಗಳ ನಂತರ ಸರ್ಕಾರದ ಸೂಚನೆಯಂತೆ ಕರ ಹೆಚ್ಚಿಸಲಾಗಿದೆ ಎಂದು ಪೌರಾಯುಕ್ತ ಆರ್.ಪಿ. ನಾಯ್ಕ ಸ್ಪಷ್ಟನೆ ನೀಡಿದರು. ಕರ ಹೆಚ್ಚಳದ ಬಗ್ಗೆ ಜನರಿಂದ ಆಕ್ಷೇಪ ಕೇಳಿ ಬರುತ್ತಿರುವುದು ಸತ್ಯ. ನಗರಸಭೆ ತನ್ನ ಆದಾಯ ಹಾಗೂ ಜನರ ಹಿತ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ರ್ಚಚಿಸಿ ಶೀಘ್ರ ನಿರ್ಣಯ ಕೈಗೊಳ್ಳೋಣ ಎಂದು ಅಧ್ಯಕ್ಷ ಡಾ. ನಿತಿನ್ ಪಿಕಳೆ ಹೇಳಿದರು.
ತ್ಯಾಜ್ಯ ನೀರು ಸ್ವಚ್ಛತೆಗೆ ಕ್ರಮ: ನಗರದ ಒಳ ಚಂರಂಡಿ ತ್ಯಾಜ್ಯ ನೀರು ಸ್ವಚ್ಛ ಮಾಡುವ ಕ್ರಿಯಾ ಯೋಜನೆಯ ಬಗ್ಗೆ ಚರ್ಚೆ ನಡೆಯಿತು. ಮಾಹಿತಿ ನೀಡಿದ ಆರ್.ಪಿ.ನಾಯ್ಕ, ತ್ಯಾಜ್ಯ ನೀರನ್ನು ಸಮುದ್ರಕ್ಕೆ ಸ್ವಚ್ಛ ಮಾಡದೇ ಬಿಡುತ್ತಿರುವ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ನಗರಸಭೆಗೆ ನೋಟಿಸ್ ನೀಡಿದೆ. ಸಮುದ್ರಕ್ಕೆ ಬಿಡುವ ನೀರಿನಲ್ಲಿ ಜೈವಿಕ ಆಮ್ಲಜನಕ ಪ್ರಮಾಣ(ಬಿಒಡಿ)10 ಕ್ಕಿಂತ ಕಡಿಮೆ ಇರಬೇಕು. ನೀರನ್ನು ಅಷ್ಟು ಶುದ್ಧ ಮಾಡುವ ತಂತ್ರಜ್ಞಾನ ಜಾರಿಗೆ ತರಲು ಸುರತ್ಕಲ್ ಎನ್ಐಟಿ ಪ್ರಾಧ್ಯಾಪಕ ಡಾ. ವಿಷ್ಣು ಅವರು ಆಗಮಿಸಿ ಪರಿಶೀಲಿಸಿ ವರದಿ ನೀಡಿದ್ದಾರೆ. ಅದಕ್ಕಾಗಿ 1.70 ಕೋಟಿ ರೂಪಾಯಿ ಕ್ರಿಯಾ ಯೋಜನೆ ಸಿದ್ಧ ಮಾಡಲಾಗಿದೆ ಎಂದು ವಿವರಿಸಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡಕರ್ ವೇದಿಕೆಯಲ್ಲಿದ್ದರು.
ರ್ಚಚಿಸಿದ ವಿಷಯಗಳು
ನಗರದ ಹೂವಿನ ಚೌಕಕ್ಕೆ ಕಾರವಾರದ ಸೇನಾನಿ ಹೆಂಜಾ ನಾಯ್ಕ ಅವರ ಹೆಸರಿ ಡಬೇಕು ಎಂದು ಹಿಂದಿನ ಸಭೆ ಯಲ್ಲಿ ಒತ್ತಾಯಿಸಿದ್ದು, ಅದು ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿಡಬೇಕು. ಠರಾವಿನಲ್ಲಿ ತಪ್ಪಾಗಿ ಪ್ರಕಟವಾಗಿದೆ. ಸರಿಪಡಿಸಬೇಕು ಎಂದು ಗಣಪತಿ ನಾಯ್ಕ ಒತ್ತಾಯಿಸಿದರು.
ನಗರಸಭೆ ಜನರಿಂದ ಭಿಕ್ಷುಕರ ಕರ ಪಡೆದು ಅದನ್ನು ಸರ್ಕಾರಕ್ಕೆ ಭರಿಸು ತ್ತದೆ. ಆದರೆ, ಭಿಕ್ಷುಕರ ಕಲ್ಯಾಣ ಕಾರ್ಯ ವಾಗುತ್ತಿಲ್ಲ ಎಂದು ಮಕ್ಬುಲ್ ಶೇಖ್ ಆಕ್ಷೇಪಿಸಿದರು. ಸರ್ಕಾರದ ನಿಯಮದಂತೆ ಭಿಕ್ಷುಕರ ಕರ ವಸೂಲಿ ಮಾಡುತ್ತಿದ್ದು, ನಾವು ನಿಯಮ ಬದಲಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಡಾ. ಪಿಕಳೆ ತಿಳಿಸಿದರು.
ನಗರದ ಸಿಗ್ನೇಚರ್ ಅಪಾರ್ಟ್ ಮೆಂಟ್ ಸಮೀಪ ನಗರಸಭೆ ಖರ್ಚಿನಲ್ಲಿ ರಸ್ತೆ ಮಾಡಿರುವ ಕುರಿತು ಶಿಲ್ಪಾ ನಾಯ್ಕ ಆಕ್ಷೇಪಿಸಿದರು. ನಗರಸಭೆಯ ಮೂಲ ರಸ್ತೆಯಾಗಿದ್ದರಿಂದ ಅಲ್ಲಿ ರಸ್ತೆ ಮಾಡಲಾಗಿದೆ ಎಂದು ಪೌರಾಯುಕ್ತ ಆರ್.ಪಿ. ನಾಯ್ಕ ಸ್ಪಷ್ಟಪಡಿಸಿದರು.