ತ್ಯಾಜ್ಯ ಜಲ ಸಂಸ್ಕರಣ ಘಟಕ ಮಾರ್ಚ್ ನಲ್ಲಿ ಪೂರ್ಣಗೊಳಿಸಿ

dc visit
Published on

ಬೀದರ್: ನಗರದ ಹೊರವಲಯದ ಕೊಳಾರ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸಾಮಾನ್ಯ ತ್ಯಾಜ್ಯ ಜಲ ಸಂಸ್ಕರಣ ಘಟಕಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಅಧಿಕಾರಿ, ಗುತ್ತಿಗೆದಾರರ ಜತೆ ವಿವಿಧೆಡೆ ಸುತ್ತಾಡಿ ಖುದ್ದು ಕೆಲಸದ ಭೌತಿಕ ಪ್ರಗತಿಯ ವೀಕ್ಷಣೆ ನಡೆಸಿದರು.

ಇದಕ್ಕೂ ಮುನ್ನ ಘಟಕ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಘಟಕ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿರುವ ಚೇತ್ರಾ ಇರಿಗೇಷನ್ ಕಂಪನಿಯವರಿಂದ ಸಮಗ್ರ ಮಾಹಿತಿ ಪಡೆದರು. ಈ ವೇಳೆ ಕಂಪನಿ ಅಧಿಕಾರಿಗಳು ಮಾತನಾಡಿ, ಕೋವಿಡ್ ಸಂಬಂಧ ಕಾಮಗಾರಿ ವಿಳಂಬವಾಗಿದೆ. ಸದ್ಯ ಶೇ.65ರಷ್ಟು ಕಟ್ಟಡ ಕಾಮಗಾರಿ ಪೂರ್ಣವಾಗಿದೆ. ಅಗತ್ಯ ಯಂತ್ರೋಪಕರಣ ಈಗಾಗಲೇ ಘಟಕದ ಸ್ಥಳಕ್ಕೆ ಬಂದಿವೆ. ಬೇಗ ಮುಂದಿನ ಕೆಲಸ ಮುಗಿಸುವುದಾಗಿ ಮಾಹಿತಿ ನೀಡಿದರು.

ಈಗಿನ ಕಾಮಗಾರಿ ನಿಗದಿತ ವೇಗದಿಂದ ನಡೆದಿಲ್ಲ. ಉಳಿದ ಕೆಲಸ ತುರ್ತಾಗಿ ಮಾಡಬೇಕು. ಬರುವ ತಿಂಗಳ ಮೂರನೇ ವಾರದಲ್ಲಿ ಘಟಕವನ್ನು ಪ್ರಾಯೋಗಿಕವಾಗಿ ಆರಂಭಿಸಬೇಕು. ಮಾರ್ಚ್ 2021ಕ್ಕೆ ಪೂರ್ಣಪ್ರಮಾಣದಲ್ಲಿ ಘಟಕದ ಪ್ರಾರಂಭಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ಗಡುವು ನೀಡಿದರು.

ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ, ಉಪ ನಿರ್ದೇಶಕ ದೇವಿಂದ್ರಪ್ಪ, ಕೆಮಿಕಲ್ ಇಂಡಸ್ಟ್ರೀಸ್ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಂಪನಿ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net