

ಗೌರಿಬಿದನೂರು: ನಗರಸಭೆ ಕಸ ಸಂಗ್ರಹಣ ಘಟಕದಲ್ಲಿನ ಖಾಲಿ ಜಾಗದಲ್ಲಿ 40 ಮೂಟೆ ಮೆಕ್ಕೆಜೋಳ ಬೆಳೆಯುವ ಮೂಲಕ ನಗರಸಭೆ ಸಿಬ್ಬಂದಿ ಕಸದಲ್ಲಿ ರಸ ತೆಗೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಡಗೂರು ಸಮೀಪದ ಮರಳೂರು ದಿನ್ನೆಯಲ್ಲಿರುವ ನಗರಸಭೆ ಕಸ ಸಂಗ್ರಹಣಾ ಘಟಕದ 3 ಎಕರೆಯಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ ಹಾಗೂ ರಾಗಿಯಲ್ಲಿ ಮೆಕ್ಕೆಜೋಳ 40 ಮೂಟೆ ಇಳುವರಿ ಬಂದಿದೆ. ಮೆಕ್ಕೆಜೋಳದ ಜತೆಗೆ ರಾಗಿಯನ್ನೂ ಬೆಳೆಯಲಾಗಿದೆ.
3 ಎಕರೆಯಲ್ಲಿ ವಿವಿಧ ಬೆಳೆ ಬೆಳೆಯುವಂತೆ ಜಿಲ್ಲಾಧಿಕಾರಿ ಸೇರಿ ಇತರ ಅಧಿಕಾರಿಗಳು ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ ಆಯುಕ್ತರು, ಸಿಬ್ಬಂದಿ ಜತೆಗೂಡಿ ಕೃಷಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಸಿಬ್ಬಂದಿ ಭೂಮಿ ಹದಗೊಳಿಸಿ, ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಹಾಗೂ ರಾಗಿ ಬಿತ್ತನೆ ಮಾಡಿದ್ದರು. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ನೀರಿನ ಕೊರತೆ ಕಾಡಿರಲಿಲ್ಲ. ಸಿಬ್ಬಂದಿ ಶ್ರಮಕ್ಕೆ ಈಗ ಪ್ರತಿಫಲ ದೊರೆತಿದೆ. ಜೋಳ ಕಟಾವು ಮಾಡಲಾಗಿದ್ದು, 40 ಮೂಟೆ ಇಳುವರಿ ಬಂದಿದೆ.
ಪೌರಕಾರ್ಮಿಕರ ಕಲ್ಯಾಣಕ್ಕೆ ಬಳಕೆ: ಜಮೀನನ್ನು ಸುಮ್ಮನೆ ಬಿಟ್ಟಿದ್ದರೆ ಗಿಡ-ಗಂಟಿ ಬೆಳೆಯುತ್ತಿದ್ದವು. ಆದರೆ ನಗರಸಭೆ ಸಿಬ್ಬಂದಿ ಶ್ರಮದಿಂದ ಉತ್ತಮ ಫಸಲು ಬಂದಿದೆ. ಅದರಿಂದ ಬಂದ ಹಣವನ್ನು ಪೌರಕಾರ್ಮಿಕರ ಕುಟುಂಬಗಳ ಕಲ್ಯಾಣಕ್ಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆ ಬೆಳೆಲಾಯಿತು. ಉತ್ತಮ ಇಳುವರಿ ಬಂದಿದೆ. ನಗರಸಭೆ ಸಿಬ್ಬಂದಿ ಶ್ರಮ ಸಾರ್ಥಕವಾಗಿದೆ. ಹೊಸ ಪ್ರಯೋಗಗಳನ್ನು ಮಾಡಲು ಹುಮ್ಮಸ್ಸು ಬಂದಿದೆ. ಜಿ.ಎನ್.ಚಲಪತಿ, ನಗರಸಭೆ ಆಯುಕ್ತ ನಂಬಿದವರಿಗೆ ಭೂತಾಯಿ ಮೋಸ ಮಾಡುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಖಾಲಿ ಇರುವ ಸರ್ಕಾರದ ಜಮೀನುಗಳಲ್ಲಿ ಕೃಷಿ ಪ್ರಯೋಗ ಮಾಡಿದರೆ ಆದಾಯದ ಜತೆಗೆ ಕೃಷಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಗಾಯತ್ರಿ ಬಸವರಾಜ್, ನಗರಸಭೆ ಅಧ್ಯಕ್ಷೆ