ತ್ಯಾಜ್ಯ ಘಟಕಕ್ಕೆ ಅಧಿಕಾರಿಗಳು ಭೇಟಿ

09Rjesh9
Published on

ಚಾಮರಾಜನಗರ: ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಾರ್ಮಿಕ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಾಯಕಾರಿ ಮತ್ತು ಆರೋಗ್ಯಕ್ಕೆ ಹಾನಿಯುಂಟು ಮಾಡುವ ದುಡಿಯುವ ಸ್ಥಳದಲ್ಲಿ ಮಕ್ಕಳನ್ನು ಇರಿಸಿಕೊಳ್ಳುವಂತಿಲ್ಲದಿದ್ದರೂ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಚಿಂದಿ ಆಯುವವರೊಂದಿಗೆ ಮಕ್ಕಳು ಇದ್ದರು. ಈ ಕುರಿತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ನ.9ರಂದು ‘ತ್ಯಾಜ್ಯರಾಶಿಯಲ್ಲಿ ಚಿಂದಿ ಆಯುವ ಚಿಣ್ಣರು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಎಂ.ಮಹೇಶ್ ಮತ್ತು ಮಕ್ಕಳ ಸಹಾಯವಾಣಿ(1098) ಜಿಲ್ಲಾ ಸಂಯೋಜಕ ಸಿದ್ದರಾಜು ತ್ಯಾಜ್ಯ ಘಟಕದಲ್ಲಿ ಪರಿಶೀಲನೆ ನಡೆಸಿದರು.

ಘಟಕವನ್ನು ಶುಕ್ರವಾರ ‘ವಿಜಯವಾಣಿ’ ಪರಿಶೀಲಿಸಿದಾಗ ಚಿಂದಿ ಆಯುವವರೊಂದಿಗೆ ಮೂವರು ಮಕ್ಕಳು, ಮೂವರು ಮಹಿಳೆಯರು, ಇಬ್ಬರು ಪುರುಷರು ಇದ್ದರು. ತ್ಯಾಜ್ಯ ಘಟಕದಂತಹ ಅಪಾಯಕಾರಿ ಸ್ಥಳದಲ್ಲಿ ಮಕ್ಕಳು ಇರುವ ಬಗ್ಗೆ ನಗರಸಭೆ ಆರೋಗ್ಯ ನಿರೀಕ್ಷಕಿ ಸುಷ್ಮಾ ಬಳಿ ಪ್ರಶ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತ್ಯಾಜ್ಯ ಘಟಕದಿಂದ ಮಹಿಳೆಯರು, ಮಕ್ಕಳನ್ನು ಕಳುಹಿಸಿಬಿಟ್ಟಿರುವ ಶಂಕೆ ಇದೆ.

ಹೀಗಾಗಿ ಸ್ಥಳಕ್ಕೆ ಮರುದಿನ ಭೇಟಿ ನೀಡಿದ ಅಧಿಕಾರಿಗಳಿಗೆ ಇಬ್ಬರು ಪುರುಷರು ಮಾತ್ರ ಸಿಕ್ಕರು. ಇವರ ಬಳಿ ಮಕ್ಕಳ ಬಗ್ಗೆ ವಿಚಾರಿಸಿದಾಗ ಅವರು ಇಲ್ಲಿರಲ್ಲ ಹೊರಟು ಹೋದರು ಎಂದರು. ಆದರೆ ಇವರು ಘಟಕದಲ್ಲಿ ವಾಸವಿರುವ ಟೆಂಟ್‌ನ ಮುಂದೆ ಮಕ್ಕಳ ಚಪ್ಪಲಿ, ಬಟ್ಟೆಗಳಿದ್ದವು. ಕಾರ್ಮಿಕ ಇಲಾಖೆ ಅಧಿಕಾರಿಗಳು ಇದನ್ನೆಲ್ಲ ಗಮನಿಸಿದರು. ಇವರಿಗೆ ಶುಕ್ರವಾರ ಮಕ್ಕಳು ತಾಜ್ಯದ ರಾಶಿಗಳ ಮಧ್ಯೆ ಇದ್ದ ವಿಡಿಯೋವನ್ನು ತೋರಿಸಲಾಯಿತು.

ತಕ್ಷಣ ನಗರಸಭೆ ಆರೋಗ್ಯ ನಿರೀಕ್ಷಕಿ ಸುಷ್ಮಾಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಚಿಂದಿ ಆಯುವ ಪುರುಷರಿಗೆ ಇಂತಹ ಅಪಾಯಕಾರಿ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರುವಂತಿಲ್ಲ ಎಂದು ಅಧಿಕಾರಿಗಳು ತಾಕೀತು ಮಾಡಿದರು. ಘಟಕದೊಳಗೆ ಮಕ್ಕಳನ್ನು ಬಿಡಬಾರದು ಎಂದು ಘಟಕದ ಕಾವಲುಗಾರನಿಗೂ ಸೂಚನೆ ನೀಡಿದರು. ಮತ್ತೆ ಮತ್ತೆ ಘಟಕದ ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ನಿರ್ಲಕ್ಷ್ಯ:

ಊರಿನವರ ತ್ಯಾಜ್ಯವನ್ನೆಲ್ಲಾ ಸಂಗ್ರಹಿಸಿ ತಂದು ಸುರಿಯವ ನಗರಸಭೆಯ ಘಟಕದಲ್ಲಿ ಮಕ್ಕಳು ಇದ್ದದ್ದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ನ.9ರಂದು ಸರ್ಕಾರಿ ರಜೆ (ಎರಡನೇ ಶನಿವಾರ) ಇದ್ದರೂ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಎಂ.ಮಹೇಶ್, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಕರ್ತವ್ಯ ಬದ್ಧತೆ ಮೆರೆದರು. ಆದರೆ ರಜೆ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್ ಮತ್ತು ಆರೋಗ್ಯ ನಿರೀಕ್ಷಕಿ ಸುಷ್ಮಾ ೆನ್ ಸಂಪರ್ಕಕ್ಕೆ ಸಿಗಲೇ ಇಲ್ಲ. ತ್ಯಾಜ್ಯದ ಘಟಕದಲ್ಲಿ ಮಕ್ಕಳು ಇದ್ದ ವಿಷಯ ಸುದ್ದಿಯಾಗುವುದರೊಳಗೆ ಅವರನ್ನು ಸ್ಥಳದಿಂದ ಕಳುಹಿಸಲಾಗಿದೆ. ಇದಿಷ್ಟೇ ಸಾಕೇ, ಈ ಹಿಂದೆ ಮಕ್ಕಳು ಇಲ್ಲಿರಲು ಕಾರಣವಾಗಿರುವುದಕ್ಕೆ ಶಿಸ್ತು ಕ್ರಮವಾಗಬೇಕಲ್ಲವೇ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net