

ಚನ್ನರಾಯಪಟ್ಟಣ : ಪರಿಸರದ ಮಾಲಿನ್ಯ ಕಡಿಮೆ ಮಾಡಲು ಮತ್ತು ಮರುಬಳಕೆಯನ್ನು ಉತ್ತೇಜಿಸಲು ತ್ಯಾಜ್ಯ ವಿಂಗಡಣೆ ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣಕುಮಾರಿ ತಿಳಿಸಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಉದ್ಯಾನದ ಆವರಣದಲ್ಲಿ ಇತ್ತೀಚೆಗೆ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಪುರಸಭೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತ್ಯಾಜ್ಯ ಉತ್ಪತ್ತಿ ಮಾಡುವವರೆ ಅದರ ವಿಲೇವಾರಿ ಜವಾಬ್ದಾರಿ ಹೊಂದಿರುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬ ತ್ಯಾಜ್ಯಉತ್ಪಾದಕನೂ ತಾನು ಉತ್ಪಾದಿಸುವ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಿ ಪುರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕು. ಪ್ರತಿನಿತ್ಯ ಮನೆಯ ಒಳಗೆ ಹಾಗೂ ಹೊರಾಂಗಣದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಬೇಕು, ಸ್ವಚ್ಛತಾ ಕಾರ್ಯಕ್ರಮ ಒಂದು ಅವಧಿಗೆ ಸೀಮಿತವಾಗಿರದೆ ನಿರಂತರ ಅಭಿಯಾನವಾದಾಗ ಸ್ವಚ್ಛ ಪಟ್ಟಣವನ್ನಾಗಿಸಲು ಸಾಧ್ಯ ಎಂದು ತಿಳಿಸಿದರು.
ಪರಿಸರ ಪ್ರೇಮಿ ಚ.ನಾ.ಅಶೋಕ್ ಮಾತನಾಡಿ, ಗಾಳಿ, ನೀರು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯುವುದರ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲರೂ ಸ್ವಚ್ಛತೆಯನ್ನು ಹೊಂದುವುದರ ಮೂಲಕ ತಾಲೂಕಿನ ಜನರ ಆರೋಗ್ಯಕರ ಜೀವನಮಟ್ಟ ಸುಧಾರಿಸುವುದೆ ಸ್ವಚ್ಛತಾ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಚ್ಛತೆ ಇರುವೆಡೆ ಸಮೃದ್ಧ ಆರೋಗ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಭಾನುವಾರದಂದು ನಮ್ಮೂರ ಸೇವೆ ಎಂಬ ಕಾರ್ಯಕ್ರಮದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ನ್ಯಾಯಾಧೀಶರುಗಳು, ಪುರಸಭೆ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು, ಸಾರ್ವಜನಿಕರು ಉದ್ಯಾವನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿತ್ ನ್ಯಾಯಾಧೀಶ ಬಿ.ಸಿ.ದೀಪು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಂದರ್ ರಾಜ್, ಕಾರ್ಯದರ್ಶಿ ಎ.ಡಿ. ಕುಮಾರ್, ಸಹ ಕಾರ್ಯದರ್ಶಿ ಶ್ವೇತಾ, ಪುರಸಭಾ ಉಪಾಧ್ಯಕ್ಷೆ ರಾಣಿಕೃಷ್ಣ, ಮುಖ್ಯಾಧಿಕಾರಿ ಯತೀಶ್ ಕುಮಾರ್, ಪರಿಸರ ಇಂಜಿನಿಯರ್ ಕಾವ್ಯಶ್ರೀ, ಆರೋಗ್ಯ ನಿರೀಕ್ಷಕರಾದ ಛಾಯಾ, ರಾಜು, ಪುರಸಭಾ ಸಿಬ್ಬಂದಿ, ಮುಖಂಡರಾದ ಗಾರೆಕೃಷ್ಣ, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.