ತ್ಯಾಗರ್ತಿಯಲ್ಲಿ 12 ಕೋಟಿ ರೂ. ವೆಚ್ಚದ ವಿದ್ಯುತ್ ಉಪಕೇಂದ್ರಕ್ಕೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಶಂಕುಸ್ಥಾಪನೆ

WEB TYR
Published on

ತ್ಯಾಗರ್ತಿ: ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ಇಂಧನ ಇಲಾಖೆಯಲ್ಲಿ ಇತ್ತೀಚಿಗೆ ಮಹತ್ವದ ಬದಲಾವಣೆ ಮಾಡಿದ್ದು ರೈತಸ್ನೇಹಿ, ಗ್ರಾಹಕಸ್ನೇಹಿ, ಕೈಗಾರಿಕಾ ಉದ್ಯಮಿಗಳ ಸ್ನೇಹಿಯಾಗಿ ಯೋಜನೆ ರೂಪಿಸಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ಗುರುವಾರ ತ್ಯಾಗರ್ತಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇಂಧನ ಇಲಾಖೆ ಮೂಲಕ ರಾಜ್ಯದ ರೈತರಿಗೆ ಉಚಿತ ವಿದ್ಯುತ್ ನೀಡುವ ನಿಟ್ಟಿನಲ್ಲಿ 16 ಸಾವಿರ ಕೋಟಿ ರೂ. ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ. ಇದು ಯಾವ ಇಲಾಖೆಯಲ್ಲೂ ಇಷ್ಟು ದೊಡ್ಡ ಮೊತ್ತವನ್ನು ಕೊಡಲು ಸಾಧ್ಯವಿಲ್ಲ. ಇದು ಪ್ರತಿವರ್ಷ ಮುಂದುವರಿಯುತ್ತದೆ ಎಂದರು.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 46 ಉಪಕೇಂದ್ರಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಯಾವುದೇ ಹಂತದಲ್ಲೂ ರೈತರಿಗೆ ತೊಂದರೆ ಆಗದಂತೆ ಉತ್ಪಾದನೆ ಹಾಗೂ ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ 7 ಕಡೆ ಉಪಕೇಂದ್ರ ಪ್ರಾರಂಭವಾಗುತ್ತಿದೆ. ಬೆಳಕು ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಬಡಜನರ ಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಅಮೃತಜ್ಯೋತಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೆಂದ್ರ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ವರ್ಷಾನುಗಟ್ಟಲೆ ಹಿಡಿಯುತ್ತಿದ್ದ ಕೆಲಸಗಳು ನಮ್ಮ ಸರ್ಕಾರ ಬಂದ ನಂತರ ತ್ವರಿತಗತಿಯಲ್ಲಿ ಆಗುತ್ತಿವೆ. ರೈತರಿಗೆ ಅನ್ನ ನೀಡುವಂತಹ ಪುಣ್ಯದ ಕೆಲಸ ನಮ್ಮ ಸರ್ಕಾರದಿಂದ ಆಗುತ್ತಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net