

ಸೋಮವಾರಪೇಟೆ: ತ್ಯಾಗದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪಟ್ಟಣದ ಜಲಾಲೀಯ, ಹನಫಿ ಜಾಮಿಯ, ಕಲ್ಕಂದೂರು, ತಣ್ಣೀರುಹಳ್ಳ, ಹೊಸತೋಟ, ಕಾಗಡಿಕಟ್ಟೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಸಮೀಪದ ಬಜೆಗುಂಡಿ ಗ್ರಾಮದ ಖೀಳಾರಿಯ ಮಸೀದಿಯಲ್ಲಿ ಬೆಳಗ್ಗೆ ಸಮುದಾಯದವರು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುವುದರೊಂದಿಗೆ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಸೀದಿಯ ಗುರುಗಳಾದ ಉಬೈದ್ ಫೈಜಿ ಪ್ರಾರ್ಥನೆಯ ನೇತೃತ್ವ ವಹಿಸಿ, ಪ್ರವಚನ ನೀಡಿದರು.
ನಂತರ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿ, ಮಾನವೀಯ ಸಂಬಂಧಗಳನ್ನು ಬೆಸೆಯುವ ಆಶಯಗಳನ್ನು ಎಲ್ಲ ಧರ್ಮಗಳು ಪ್ರತಿಪಾದಿಸಿದೆ ಮತ್ತು ಹಿಂಸೆಯನ್ನು ಕಟುವಾಗಿ ವಿರೋಧಿಸಿದೆ. ಇಸ್ಲಾಂ ಮಾನವೀಯ ಸಂಬಂಧಗಳ ಅಡಿಪಾಯದಲ್ಲಿ ಬೇರೂರಿದೆ. ನಾಡಿನಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲಿ ಎಂದು ಹೇಳಿದರು.
ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಅನೀಫ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೈಮಾನ್, ಸಹ ಕಾರ್ಯದರ್ಶಿ ನಿಯಾದ್, ಖಜಾಂಚಿ ಅದ್ರಾಮ್ ಇದ್ದರು.