ತ್ಯಾಗ-ಬಲಿದಾನದ ಸಂಕೇತ ಸ್ವಾತಂತ್ರ್ಯ

karnataka collage
Published on

ಬೀದರ್: ಅಸಂಖ್ಯಾತ ಜನರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದಕ್ಕಿದ್ದು, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಪದವಿಪೂರ್ವ ಕಾಲೇಜು ಸಹಯೋಗದಡಿ ನಗರದಲ್ಲಿ ಹಮ್ಮಿಕೊಂಡಿದ್ದ ಮನೆ-ಮನೆಗೆ ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಎಂಬುದು ಕೇವಲ ಪದವಲ್ಲ. ನಮ್ಮ ಪೂರ್ವಜರ ತ್ಯಾಗ, ಬಲಿದಾನದ ಸಂಕೇತ ಎಂದರು.
ಐಎಎಸ್, ಐಪಿಎಸ್ನಂಥ ಉನ್ನತ ಹುದ್ದೆಗಳು ಒಬ್ಬರಿಗೆ ಸಾಧ್ಯವಾಗುವುದಾದರೆ ಎಲ್ಲರಿಗೂ ಸಾಧ್ಯವಾಗುತ್ತದೆ. ಆದರೆ ಅದಕ್ಕೆ ತಕ್ಕ ಓದು ಮತ್ತು ಪರಿಶ್ರಮ ಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ಸದುಪಯೋಗ ಪಡೆದು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಜಗತ್ತಿನಲ್ಲಿ ಸತ್ಯ ಮತ್ತು ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದ ಏಕೈಕ ರಾಷ್ಟ್ರ ಭಾರತ. ಅನೇಕ ದೇಶಗಳು ಸ್ವಾತಂತ್ರ್ಯ ಪಡೆಯುತ್ತಲೇ ಒಳಜಗಳಾಗಿ ವಿಂಗಡಣೆಯಾಗಿವೆ. ಭಾರತದಲ್ಲಿ ಸೌಹಾರ್ದ ಮತ್ತು ಭಾವೈಕ್ಯದಿಂದ ಎಲ್ಲ ವರ್ಗದವರು ಜೀವನ ನಡೆಸುತ್ತಿರುವ ಕಾರಣ ನಾವು ಜಗತ್ತಿಗೆ ಗುರು ಎನಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರಾಶಿ ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಶೆಟಕಾರ, ಕಾರ್ಯದರ್ಶಿ ಸಿದ್ರಾಮ ಪಾರಾ, ಆಡಳಿತ ಮಂಡಳಿ ಸದಸ್ಯರಾದ ವೀರಭದ್ರಪ್ಪ ಬುಯ್ಯ, ಸಿದ್ಧರಾಜು ಪಾಟೀಲ್ ಇತರರಿದ್ದರು. ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಣೆ ಮಾಡಿದರು. ಶಿವಕುಮಾರ ಕಟ್ಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net