

ಕಮಲನಗರ: ಭಾವೈಕ್ಯತೆ ಸಾರುವ ಹಾಗೂ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಈದ್ ಉಲ್ ಅದಾ (ಬಕ್ರೀದ್) ಹಬ್ಬದ ನಿಮಿತ್ತ ಸಹಸ್ರಾರು ಸಂಖ್ಯೆಯಲ್ಲಿ ಸಮುದಾಯದವರು ಬೆಳಗ್ಗೆ ಹೊಸ ಬಟ್ಟೆ ತೊಟ್ಟು ಒಟ್ಟಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆ ನಂತರ ಹಿರಿಯರು, ಕಿರಿಯರು ವಯಸ್ಸಿನ ಭೇದವಿಲ್ಲದೆ ಪರಸ್ಪರರು ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿ ಬಂಧು-ಬಳಗ, ಸ್ನೇಹಿತರೊಂದಿಗೆ ಸೇರಿ ಭೋಜನ ಸವಿದರು.
ಧರ್ಮಗುರು ಇಮಾಮ್ ಮುಫ್ತಿ ಶಾರೂಖ್ ಮಾತನಾಡಿ, ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಹಬ್ಬ ಇದಾಗಿದೆ. ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಲು ಅವಕಾಶ ಮಾಡಿಕೊಡುವುದೇ ಬಕ್ರೀದ್ ಹಬ್ಬದ ವಿಶೇಷತೆ. ಎಲ್ಲರೂ ಕೂಡಿ ಸಮಾನತೆಯಿಂದ ಬಾಳಲು ಶಾಂತಿ ಸೌಹಾರ್ದತೆಯ ಪ್ರತೀಕವಾಗಿದೆ. ಬಕ್ರೀದ್ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿ, ಎಲ್ಲರೂ ಕೂಡಿ ಬಾಳುವಂತಾಗಲಿ ಎಂದು ಆಶಿಸಿದರು.
ಶೇರು ಭಾಗವಾನ, ಸದರ್ ನಾಜಿಂ ಬಾಗವಾನ, ಅಜರ್ ಬಾಗವಾನ, ಶಬ್ಬಿರ್ ಖುರೇಶಿ, ಮುಕ್ತಾರ್ ಮನಿಯಾರ್, ಅಯೂಬ್ ಖುರೇಶಿ, ಇಲಾಹಿ ಬಾಗವಾನ, ಅಬೇದ್ ಶೇಖ್, ಮೊಹಸೀನ್ ಬಾಗವಾನ, ಶೇಖ್ ಮಾಜೀದ್, ಬಾಬಾ ಬಾಗವಾನ, ಇಸ್ಮಾಯಿಲ್ ಪಠಾಣ, ಖಮರುದ್ದೀನ್ ಬಾಗವಾನ, ಸಲಾವುದ್ದೀನ್, ಜುನೇದ್ ಬಾಗವಾನ, ಶಫಿ, ಮಜ್ಜೀದ್, ಮೊಹೀನ್ ಇತರರಿದ್ದರು.