

ಆಲ್ದೂರು: ಹಾಂದಿ ಸಮೀಪದ ತೋಳೂರು ಗುಡ್ಡದಲ್ಲಿ ಸೋಮವಾರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಒಂಟಿ ಸಲಗವನ್ನು ಸೆರೆ ಹಿಡಿದಿದೆ. ಕಾಡಾನೆ ಕೆಲವು ವರ್ಷಗಳಿಂದ ಹಾಂದಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ತೊಂದರೆ ನೀಡುತ್ತಿತ್ತು. ಹಲವು ಬಾರಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿಗೆ ಯತ್ನಿಸಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದುಂಟು. ಅರಣ್ಯ ಇಲಾಖೆಗೂ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡುತ್ತಿತ್ತು.
ಕಳೆದ ವಾರ ಸಕಲೇಶಪುರ ಭಾಗದಿಂದ ಸುಮಾರು 22 ಕಾಡಾನೆಗಳ ಗುಂಪು ಆಲ್ದೂರು ಭಾಗದಲ್ಲಿ ಬೀಡು ಬಿಟ್ಟಿದ್ದು ಅವುಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲು ನಾಲ್ಕು ಕುಮ್ಕಿ ಆನೆಗಳನ್ನು ತರಿಸಿದ್ದು ಕಾಡಾನೆಗಳ ಗುಂಪು ಇಲ್ಲಿಂದ ವಾಪಸಾಗಿದ್ದರಿಂದ ಅರಣ್ಯ ಇಲಾಖೆ ನೆಮ್ಮದಿ ನಿಟ್ಟುಸಿರು ಬಿಟ್ಟಿತ್ತು. ಆದರೆ ಹಾಂದಿ ಭಾಗದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯುವುದು ಇಲಾಖೆಗೆ ಸವಾಲಾಗಿತ್ತು.
ಮೂಡಿಗೆರೆ ಸಮೀಪದ ಕಾನಳ್ಳಿ ಕಾಡಿನಲ್ಲಿದ್ದ ಈ ಆನೆ ತಪ್ಪಿಸಿಕೊಂಡು ಉಪಟಳ ನೀಡುತ್ತಿತ್ತು. ಸುಮಾರು 14 ವರ್ಷ ಪ್ರಾಯದ ಈ ಆನೆ ಕುಳ್ಳಗಿದ್ದರಿಂದ ಇದಕ್ಕೆ ಕಾನಳ್ಳಿ ಕುಳ್ಳ ಎಂದು ಇಲಾಖೆಯವರು ಹೆಸರಿಟ್ಟಿದ್ದರು.
ಸೋಮವಾರ ಬೆಳಗ್ಗೆ ತೋಳೂರು ಗುಡ್ಡದಲ್ಲಿದ್ದ ಆನೆಯನ್ನು ಸೆರೆಹಿಡಿಯಲು ಇಲಾಖೆಯವರು ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಇಲಾಖೆಯ ಸಿಬ್ಬಂದಿ ಮೇಲೆ ದಾಳಿಗೆ ಯತ್ನ್ನಿಸಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ತೋಳೂರು ಗುಡ್ಡದಿಂದ ಮಧ್ಯಾಹ್ನ ಆನೆ ಹಾಂದಿ ಪಟ್ಟಣದ ಮುಖ್ಯ ರಸ್ತೆಯೊಳಗೆ ನುಗ್ಗಿದ್ದು ಹಲವು ಜನರು ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಆನೆ ಬೇರುಗಂಡಿ ಮಠದ ಬಳಿ ಬಂದು ಮತ್ತೆ ತೋಳೂರು ಗುಡ್ಡದ ಕಡೆಗೆ ಸಾಗಿತು.
ಬೆಳಗ್ಗೆ ಕಾಡಾನೆ ತೋಳೂರು ಗುಡ್ಡದಲ್ಲಿರುವ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ 11 ಗಂಟೆಗೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರೂ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಅರಿವಳಿಕೆ ತಜ್ಞ ವಸೀಂ ಬಂಡಿಪುರ ಅಭಯ ಅರಣ್ಯದಿಂದ ತಡವಾಗಿ ಆಗಮಿಸಿದ್ದರಿಂದ ಕಾರ್ಯಾಚರಣೆ ವಿಳಂಭವಾಯಿತು. ಕುಮ್ಕಿ ಆನೆಗಳಾದ ಭೀಮ, ಸುಗ್ರೀವ, ಏಕಲವ್ಯ, ಮಹೇಂದ್ರ, ಧನಂಜಯ್, ಕಂಜನ್‌ಗಳನ್ನು ಬಳಸಿಕೊಂಡು ಒಂಟಿ ಸಲಗವನ್ನು ಸಂಜೆ ಸೆರೆ ಹಿಡಿಯಲಾಯಿತು.
ಕಾನಳ್ಳಿ ಕುಳ್ಳನ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಿ ಲಾರಿಗೆ ಹತ್ತಿಸುವ ಸಂದರ್ಭದಲ್ಲಿ ಗಾಬರಿಗೊಂಡು ಕುಮ್ಕಿ ಆನೆಗಳ ಮೇಲೆರೆಗಲೂ ಪ್ರಯತ್ನಿಸಿತು. ಆದರೆ ಕುಮ್ಮಿ ಆನೆಗಳು ಒಂಟಿ ಸಲಗವನ್ನು ಸೊಂಡಿಲಿನಲ್ಲಿ ತಳ್ಳಿ ಕ್ರೇನ್ ಮುಖಾಂತರ ಲಾರಿಗೆ ಹತ್ತಿಸುವಲ್ಲಿ ಸಫಲವಾದವು.
ಆನೆ ಕಾರ್ಯಾಚರಣೆ ಸಂದರ್ಭದಲ್ಲಿ ಜನರು ಮೊಬೈಲ್‌ಗಳಲ್ಲಿ ವಿಡಿಯೋ ಮಾಡಲು ಮುಗ್ಗಿ ಬೀಳುತ್ತಿದ್ದು ಕೆಲವು ಸಂದರ್ಭದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆಯವರು ಲಾಠಿ ಬೀಸಿ ಜನರನ್ನು ಓಡಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಮೋಹನ್, ಆಲ್ದೂರು ವಲಯ ಅರಣ್ಯಧಿಕಾರಿ ಕೆ.ಆರ್.ಹರೀಶ್‌ಕುಮಾರ್, ಮೂಡಿಗೆರೆ ವಲಯ ಅರಣ್ಯಧಿಕಾರಿ ಕಾವ್ಯಾ, ಉಪವಲಯ ಅರಣ್ಯಾಧಿಕಾರಿಗಳಾದ ಸಂದೀಪ್ ಚಿದಾನಂದ್, ವಿಜಯ್‌ಕುಮಾರ್, ನಾಗರಾಜ್, ರಶ್ಮಿ, ವೀರಭದ್ರಪ್ಪ, ರಂಜನ್, ಗಸ್ತು ಅರಣ್ಯಪಾಲಕ ಕಿಶೋರ್, ಪ್ರಕಾಶ್, ತೀರ್ಥಕುಮಾರ್, ವಿಜೇಂದ್ರ, ಭದ್ರಾ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಕಾರ್ತಿಕ್, ಆಲ್ದೂರು ಪಿಎಸ್‌ಐ ರವಿ ಹಾಗೂ ಸಿಬ್ಬಂದಿ, ಆನೆ ಕಾರ್ಯಪಡೆ ಸೇರಿದಂತೆ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.