

ಚಿತ್ರದುರ್ಗ:ಮುರುಘಾಮಠ ಜಮುರಾ ಕಲಾಲೋಕದ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಅವರು ಬೆಂಗಳೂರು ಬಸವ ಸಮಿತಿಯ 2025ನೇ ಸಾಲಿನ ವರ್ಷದ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದ್ದಾರೆ. ಒಂದು ಲಕ್ಷ ರೂ.ನಗದು ಮತ್ತು ಫಲಕವನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು ಬಸವ ಸಮಿತಿಯಲ್ಲಿ ಏ.30 ಏರ್ಪಡಿಸಿರುವ ವಿಶ್ವ ಬಸವ ಜಯಂತಿ ಕಾರ‌್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ.
ತೋಟಪ್ಪ ಕಳೆದ 35 ವರ್ಷಗಳಿಂದ ವಚನ ಗಾಯನ,ರೂಪಕ ಮತ್ತು ನಾಟಕಗಳ ಮೂಲಕ ನಾಡಿನೆಲ್ಲೆಡೆ ಬಸವ ಪ್ರಜ್ಞೆಯನ್ನು ಪ್ರಚರು ಪಡಿಸುತ್ತಾ ಬಂದಿದ್ದಾರೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಪುಟ್ಟರಾಜ ಗವಾಯಿ ಅವರ ಶಿಷ್ಯರಾಗಿ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಸಂಗೀತ ನಿರ್ದೇಶಕರಾಗಿ,ಬಸವಾದಿ ಶರಣರು ರಚಿಸಿದ ವಚನಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರಾಜ್ಯಹಾಗೂ ಹೊರ ರಾಜ್ಯಗಳಲ್ಲಿ ಸಂಗೀತ ಕಾರ‌್ಯಕ್ರಮಗಳನ್ನು ಕೊಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ವಚನ ಸಂಗಿತೋ ತ್ಸವ,ಹಂಪಿ ಉತ್ಸವ,ದುರ್ಗೋತ್ಸವ,ಹಾವೇರಿ ಜಿಲ್ಲಾ ಉತ್ಸವದಲ್ಲಿ ಸಂಗೀತ ಕಾರ‌್ಯಕ್ರಮ ನೀಡಿದ್ದಾರೆ.