ತೋಟದಲ್ಲೇ ಹಣ್ಣಾಗುತ್ತಿದೆ ಬಾಳೆ; ಸಂಕಷ್ಟದಲ್ಲಿ ಹೂವು, ದ್ರಾಕ್ಷಿ, ತರಕಾರಿ ಬೆಳೆಗಾರರು; ನೆರವಿನ ನಿರೀಕ್ಷೆಯಲ್ಲಿ ರೈತರು

M 29 CPTN 1
Published on

ಚನ್ನರಾಯಪಟ್ಟಣ: ಬೂದಿಗೆರೆ ಗ್ರಾಮದಲ್ಲಿ ಹಲವರು ಬೆಳೆದಿರುವ ಬಾಳೆ ಕಟಾವಿಗೆ ಬಂದಿದ್ದು, ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಆಗದೆ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆಯಲ್ಲಿ ರೈತ ಕೆ.ವೆಂಕಟೇಶಪ್ಪ 5 ಎಕರೆಯಲ್ಲಿ ಬಾಳೆ ಬೆಳೆದಿದ್ದು, 40 ರಿಂದ 50 ಟನ್ ಸಲು ಬಂದಿದೆ. ಬಾಳೆಕಾಯಿಯನ್ನು 15 ದಿನಗಳಲ್ಲಿ ಕಟಾವು ಮಾಡದಿದ್ದರೆ, ಗಿಡದಲ್ಲೇ ಹಣ್ಣಾಗಿ ಲಕ್ಷಾಂತರ ರೂ. ನಷ್ಟವಾಗಲಿದೆ. ಬೆಳೆ ತೋಟದಲ್ಲೇ ನಾಶವಾಗುತ್ತಿರುವುದನ್ನು ನೋಡಿದರೆ ಸಂಕಟ ತಡೆಯಲು ಆಗುತ್ತಿಲ್ಲ. ಸರ್ಕಾರ ನಮ್ಮಂತಹವರ ನೆರವಿಗೂ ಬರಬೇಕು ಎಂದು ವೆಂಕಟೇಶಪ್ಪ ಆಗ್ರಹಿಸಿದ್ದಾರೆ.

ಕರೊನಾ ಛಾಯೆ ಹೂವು, ದ್ರಾಕ್ಷಿ, ತರಕಾರಿ ಬೆಳೆಗಾರರ ಮೇಲೂ ಆವರಿಸಿದ್ದು, ನಷ್ಟ ಅನುಭವಿಸುವಂತಾಗಿದೆ. ಸಾಲ ಮಾಡಿ ಕೃಷಿ ಮಾಡಿದ್ದ ರೈತರೀಗ ಹಾಕಿದ್ದ ಬಂಡವಾಳವೂ ಇಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೂದಿಗೆರೆ ರೈತ ಪರ ಮುಖಂಡ ಭರತ್ ಮಾತನಾಡಿ, ಬರಗಾಲದಲ್ಲೂ ರೈತರು ಕಷ್ಟಪಟ್ಟು ಬೆಳೆದ ಬೆಳೆ ಜಮೀನಿನಲ್ಲೇ ಕೊಳೆಯುವಂತಾಗಿದೆ. ಕೊಳವೆಬಾವಿ ಕೊರೆಸಲು, ಬೆಳೆ ಬಿತ್ತನೆ ವೇಳೆ, ಔಷಧ ಸಿಂಪಡಿಸುವಾಗಲೂ ಸಾಲ ಮಾಡಿಯೇ ಹಲವರು ಕೃಷಿ ಮಾಡುತ್ತಿದ್ದಾರೆ. ಮುಂದಿನ ಬೆಳೆಗೂ ಬಂಡವಾಳ ಹೂಡಿಕೆ ಮಾಡಲು ಸಾಲ ಮಾಡಬೇಕು. ಹೀಗೆ ಸಾಲ ಮಾಡಿಕೊಂಡೇ ಹೋಗುತ್ತಿದ್ದರೆ ಅನ್ನದಾತರ ಬದುಕು ದುಸ್ತರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರಿಂದ ಬೆಳೆ ಖರೀದಿಸಲು ಸರ್ಕಾರದಿಂದ ನಮಗೆ ಆದೇಶ ಬಂದಿಲ್ಲ. ಡಿಸಿ ಗಮನಕ್ಕೂ ತರಲಾಗಿದೆ. ಸರ್ಕಾರ ಆದೇಶಿಸಿದ ಕೂಡಲೇ ರೈತರಿಂದ ಖರೀದಿಸಿ ಗ್ರಾಹಕರ ಮನೆಗೆ ತಲುಪಿಸಲಾಗುವುದು. ಗಂಗಪ್ಪ ಕುಂಬಾರ್, ತೋಟಗಾರಿಕೆ ಇಲಾಖೆ ನಿರ್ದೇಶಕ ಬಾಳೆ, ದ್ರಾಕ್ಷಿ, ಹೂವು ಕಟಾವಿಗೆ ಬಂದಿದ್ದು, ಇವುಗಳಿಗೀಗ ಮಾರುಕಟ್ಟೆ ಇಲ್ಲದ ಕಾರಣ ಕೃಷಿಕರು ಕೈ ಸುಟ್ಟುಕೊಳ್ಳುವಂತಾಗಿದೆ. ಅವಿನಾಶ್, ಯಡಿಯೂರು ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net