ತೋಟದಲ್ಲಿ ಬಂಧಿಯಾಗಿದ್ದ ಆನೆ ಕಾಡಿಗೆ

nrp elephant
Published on

ಎನ್.ಆರ್.ಪುರ: ಕಡಹಿನಬೈಲು ಗ್ರಾಮ ಪಂಚಾಯಿತಿ ಸೂಸಲವಾನಿ ಗ್ರಾಮದ ಜೇನುಬಿಟ್ಟಸರದ ಟಿ.ವಿ.ವಿಜಯ ಎಂಬುವರ ಅಡಕೆ ತೋಟಕ್ಕೆ ಸೋಮವಾರ ರಾತ್ರಿ ಬಂದಿದ್ದ ಸಲಗ ತೋಟದ ಸುತ್ತ ಇದ್ದ ಐಬೆಕ್ಸ್ ಬೇಲಿ ದಾಟಲಾಗದೆ ಬೆಳಗ್ಗೆಯವರೆಗೂ ತೋಟದಲ್ಲೇ ಸುತ್ತಾಡಿತು. ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಒಂಟಿ ಸಲಗವನ್ನು ಅಟ್ಟಿದರು.

ಸೋಮವಾರ ರಾತ್ರಿ ಆರಂಬಳ್ಳಿ ಮೀಸಲು ಅರಣ್ಯದಿಂದ ಸಮೀಪದ ಜೇನುಬಿಟ್ಟ ಸರದ ಅಡಕೆ ತೋಟಕ್ಕೆ ಬಂದಿದ್ದ ಸಲಗ ತೋಟದ ಸುತ್ತ ಐಬೆಕ್ಸ್ ಬೇಲಿ ಇರುವುದರಿಂದ ತೋಟದಿಂದ ಹೊರಗೆ ಹೋಗಲಾರದೆ ಒಳಗೇ ಉಳಿದುಕೊಂಡಿದೆ. ಮಂಗಳವಾರ ಬೆಳಗ್ಗೆ ತೋಟಕ್ಕೆ ಕೆಲಸ ಮಾಡಲು ಬಂದ ಕಾರ್ಮಿಕರು ಆನೆಯನ್ನು ಕಂಡು ತೋಟದ ಮಾಲೀಕರಿಗೆ ಹಾಗೂ ಅರಣ್ಯ ಇಲಾಖೆಗೆ ತಿಳಿಸಿದರು. ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಅರಣ್ಯ ರಕ್ಷಕ ಮಂಜಯ್ಯ, ಅರಣ್ಯ ಸಿಬ್ಬಂದಿ, ಎಲಿಫೆಂಟ್ ಟಾಸ್ಕ್‌ಫೋರ್ಸ್ ತಂಡದವರು ಆಗಮಿಸಿ ಪಟಾಕಿ ಸಿಡಿಸಿ ಕಾಡಾನೆಯನ್ನು ಸಮೀಪದ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿದರು. ಒಂದು ವಾರದಿಂದಲೂ ಜೇನು ಬಿಟ್ಟಸರದ ತೋಟಗಳಿಗೆ ಕಾಡಾನೆಗಳ ಹಿಂಡು ನುಗ್ಗುತ್ತಿವೆ. ಮಡಬೂರು ಭಾಗಲ್ಲಿ ಸುತ್ತಾಡುತ್ತಿರುವ ಒಂಟಿ ಆನೆ ಇದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಕಾಡಾನೆಯು ತೋಟಕ್ಕೆ ದಾಳಿ ಇಡುತ್ತಿರುವುದರಿಂದ ಆನೆಯನ್ನು ಕಾಡಿಗೆ ಅಟ್ಟಿಸಲು ಕಾಡಾನೆ ಇರುವ ಜಾಗವನ್ನು ಮೊದಲೇ ಗುರುತಿಸಲು ಅನುಕೂಲವಾಗುವಂತೆ ಅರಣ್ಯ ಇಲಾಖೆಯಿಂದ ಸೋಲಾರ್ ಬ್ಯಾಟರಿಚಾಲಿತ ಎಲಿಫೆಂಟ್ ಡಿಟೆಕ್ಟರ್ ಮಷಿನ್ ಅಳವಡಿಸಲಾಗಿದೆ ಎಂದು ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.

ಕಾಡಾನೆ ಸಂಚರಿಸುತ್ತಿರುವ ಜಾಗದಲ್ಲಿ ಮಷಿನ್ ಇಡಲಾಗುತ್ತದೆ. ಮಷಿನ್ ಇರುವ ಜಾಗದಿಂದ 30 ಮೀಟರ್ ಸುತ್ತಳತೆಯಲ್ಲಿ ಕಾಡಾನೆ ಬಂದರೆ ಸೈರನ್ ಕೂಗುತ್ತದೆ ಹಾಗೂ ಪ್ಲಾಶ್‌ಲೈಟ್ ಆನ್‌ಆಗುತ್ತದೆ. ಇದನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾರ್ಯಾಚರಣೆ ಮಾಡಲು ಅನುಕೂಲವಾಗಿದೆ. ಸದ್ಯಕ್ಕೆ ಒಂದು ಎಲಿಫೆಂಟ್ ಡಿಟೆಕ್ಟರ್ ಮಷಿನ್ ತರಿಸಲಾಗಿದೆ. ಶೀಘ್ರದಲ್ಲೇ ಇನ್ನೊಂದು ಮಷಿನ್ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net