ತೋಟದ ರಸ್ತೆಗೆ ಬೇಕಿದೆ ದುರಸ್ತಿ

13-66
ಬಾಡಗಿ ಗ್ರಾಮದಿಂದ ಕರಿಗಾರ ಮಾರ್ಗವಾಗಿ ತುಂಗಳ ಹದ್ದಿನವರೆಗಿನ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿರುವುದು.
Published on

ಶ್ರೀಶೈಲ ಮಾಳಿ ಅರಟಾಳ: ಸಮೀಪದ ಬಾಡಗಿ ಗ್ರಾಮದಿಂದ ತುಂಗಳ ಸರಹದ್ದಿನವರೆಗಿನ ರಸ್ತೆ ಕೆಟ್ಟು ಹೋಗಿ ಹಲವು ವರ್ಷ ಕಳೆದರೂ ಇಲ್ಲಿಯವರೆಗೆ ಅಭಿವೃದ್ಧಿ ಕಾಣದಿರುವುದರಿಂದ ಸಂಚರಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.

ಅನೇಕ ವರ್ಷಗಳಿಂದ ರಸ್ತೆ ಹದಗೆಟ್ಟು ಹೋಗಿದೆ. ಆದರೆ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ರಸ್ತೆ ದುರಸ್ತಿಯತ್ತ ಗಮನ ಹರಿಸುತ್ತಿಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗುತ್ತಿದೆ.

ಗ್ರಾಮದ ಡಾ. ಅಂಬೇಡ್ಕರ್ ವೃತ್ತದಿಂದ ಕರಿಗಾರ ವಸತಿ ಮೂಲಕ ತುಂಗಳಕ್ಕೆ ಹೋಗುವ ರಸ್ತೆಯ ಮೂಲಕ ಸಂಚರಿಸಿ ಜಮಖಂಡಿಗೆ ಹೋಗಲು ಸಮೀಪದ ರಸ್ತೆಯಾಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಸಂಚರಿಸುತ್ತಾರೆ. ಆದರೆ, ರಸ್ತೆ ಸರಿಯಿಲ್ಲದ ಕಾರಣ ಅನೇಕ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವುದನ್ನು ಬಿಟ್ಟಿದ್ದಾರೆ. ರಸ್ತೆಯಲ್ಲಿ ಆಳೆತ್ತರದ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ತೋಟದ ರಸ್ತೆಯ ಸುತ್ತಲಿನ ಜನರು ಪ್ರತಿನಿತ್ಯ ಕೈಯಲ್ಲಿ ಜೀವ ಹಿಡಿದು ದ್ವಿಚಕ್ರ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವರ್ಷ ಸತತವಾಗಿ ಸುರಿಯುತ್ತಿರುವ ಮಳೆಗೂ ಸಹ ಗುಂಡಿಗಳು ದೊಡ್ಡದಾಗಿವೆ. ಆ ಗುಂಡಿಗಳನ್ನು ನೀರು ಸಂಗ್ರಹಣಗೊಳ್ಳುತ್ತಿರುವುದರಿಂದ ಗುಂಡಿಗಳು ಕಾಣದೆ ಅನೇಕ ದ್ವಿಚಕ್ರ ಹಾಗೂ ಸೈಕಲ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ದೊಡ್ಡ ಪ್ರಮಾಣದ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಗೊಳಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net