ತೋಟದ ಕಾರ್ಮಿಕರ ಪ್ರತಿಭಟನೆ

19 vtp 1 CITU Protest
ಕೊಡಗು ಜಿಲ್ಲಾ ಜನರಲ್ ವರ್ಕರ್ಸ್‌ ಯೂನಿಯನ್ ನೇತೃತ್ವದಲ್ಲಿ ತೋಟದ ಕಾರ್ಮಿಕರು ಬುಧವಾರ ವಿರಾಜಪೇಟೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Published on

ವಿರಾಜಪೇಟೆ: ಕೊಡಗು ಜಿಲ್ಲಾ ಜನರಲ್ ವರ್ಕರ್ಸ್‌ ಯೂನಿಯನ್ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ತೋಟದ ಕಾರ್ಮಿಕರು ಬುಧವಾರ ತಾಲೂಕು ಕಚೇರಿ ಹಾಗು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ್ ಮಾತನಾಡಿ, ಮಾಲ್ದಾರೆ ಹಾಗೂ ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಪೈಸಾರಿ ಜಾಗ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನಿವೇಶನ ನೀಡಲು ತಯಾರಿದ್ದರೂ ಕೆಲವು ಪಟ್ಟಭದ್ರರು ಅದನ್ನು ಗೋಮಾಳ ಎಂದು ಬಡವರಿಗೆ ನಿವೇಶನ ನೀಡಲು ಅಡ್ಡಗಾಲು ಹಾಕುತ್ತಿದ್ದಾರೆ. 15 ದಿನಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡದಿದ್ದರೆ, ಅದೇ ಸ್ಥಳದಲ್ಲಿ ವಾಸ್ತವ್ಯ ಹೂಡಲಾಗುವುದು ಎಂದು ಹೇಳಿದರು.


ಕೇಂದ್ರ ಹಾಗು ರಾಜ್ಯ ಸರ್ಕಾರ ಬಡವರ ರಕ್ತ ಹೀರುತ್ತಿದ್ದು, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಂದಾಯ ಹಾಗು ತಹಸೀಲ್ದಾರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹಚ್ಚಾಗಿದೆ ಎಂದು ಆರೋಪಿಸಿದರು.
ಕಾಡನೆ ಹಾವಳಿಯಿಂದ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಹಲವರು ಮೃತಪಟ್ಟಿದ್ದಾರೆ. ಅನೇಕರು ಅಂಗವಿಕಲರಾಗಿದ್ದಾರೆ. ವಾಣಿಜ್ಯ ಬೆಳೆಗಳು ನಾಶವಾಗಿದೆ. ಕಾಡಾನೆ ದಾಳಿಯಿಂದ ಮೃತಪಟ್ಟರೆ 25 ಲಕ್ಷ ರೂ. ನೀಡಬೇಕು. ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.


ತಹಸೀಲ್ದಾರ್ ಅರ್ಚನಾ ಭಟ್ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ತಹಸೀಲ್ದಾರ್ ಮಾತನಾಡಿ, ನಿವೇಶನ ರಹಿತರಿಗೆ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುವುದು. ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಡೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಬಿ. ರಮೇಶ್, ಉಪ ಕಾರ್ಯದರ್ಶಿ ರಾಜಪ್ಪ, ಹೋರಾಟ ಸಮಿತಿ ಅಧ್ಯಕ್ಷ ರಾಜಪ್ಪ, ಜಿಲ್ಲಾ ಕಾರ್ಯದರ್ಶಿ ಸಾಬು, ಕಾರ್ಮಿಕ ಮುಖಂಡರಾದ ಡಾ. ದುರ್ಗಾಪ್ರಸಾದ್, ಭರತ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net