

ಯೋಜನೆಯಡಿ ತೋಟ ಕಟ್ಟಿದ ಹಲವರಿಗೆ 2 ಕೋಟಿ ರೂ. ಜಮೆ, ಕೈತುಂಬಾ ಆದಾಯದ ನಿರೀಕ್ಷೆ
ಕೆ.ಕೆಂಚಪ್ಪ ಮೊಳಕಾಲ್ಮೂರು
ಹಣ್ಣು ಕೃಷಿ ಕೈಗೊಳ್ಳಲು ನೀರಿದೆ. ಆದರೆ, ಕೈಯಲ್ಲಿ ಕಾಸಿಲ್ಲ ಎಂದು ಕೊರಗುವ ಬದಲು, ನರೇಗಾ ಯೋಜನೆ ಬಳಕೆ ಮಾಡಿಕೊಂಡರೆ ಸಮೃದ್ಧವಾದ ತೋಟಗಾರಿಕೆ ಬೆಳೆ ಬೆಳೆಯಬಹುದು ಎಂಬುದನ್ನು ಬಯಲುಸೀಮೆಯ ರೈತರು ಸಾಧಿಸಿ ತೋರಿಸಿದ್ದಾರೆ.
ಹೌದು, ತೋಟಗಾರಿಕೆ ಇಲಾಖೆ ಸಹಕಾರದಿಂದ ಹಣ್ಣಿನ ಬೇಸಾಯಕ್ಕೆ ಕೈ ಹಾಕಿರುವ ಮೊಳಕಾಲ್ಮೂರು ತಾಲೂಕಿನ ರೈತರಿಗೆ ಬರೋಬ್ಬರಿ 2 ಕೋಟಿ ರೂ. ಸಂದಾಯವಾಗಿದೆ.
*ಕೈತುಂಬಾ ಆದಾಯದ ಭರವಸೆ: ಕೊಳವೆಬಾವಿ ಹೊಂದಿರುವ ನೂರಾರು ರೈತರು ಕಳೆದ ಮೂರು ವರ್ಷದ ಅವಧಿಯಲ್ಲಿ 410 ಎಕರೆ ಪ್ರದೇಶದಲ್ಲಿ ಬಾಳೆ, ದಾಳಿಂಬೆ, ತೆಂಗು, ಸಪೋಟ, ಪಪ್ಪಾಯಿ, ಪೇರಲ, ಮೊಸುಂಬಿ, ಗುಲಾಬಿ, ಸೀತಾಫಲ, ಮಾವು, ಗೋಡಂಬಿ, ಅಂಜೂರ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಕೈತುಂಬಾ ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದಾರೆ.
ಹಣ್ಣಿನ ಬೆಳೆಗಳ ಯೋಜನೆ ಮಾನದಂಡದಂತೆ ಸಸಿಗಳ ಖರೀದಿ, ನಾಟಿ, ಗುಂಡಿ ತಗೆಯುವುದು. ಗೊಬ್ಬರ, ನೀರು ಕೊಟ್ಟು ಆರೈಕೆ ಮಾಡಲು ತಗಲುವ ಖರ್ಚನ್ನು ಶ್ರಮದ ಮೂಲಕ ಹಿಂಪಡೆಯಲು ಖಾತ್ರಿ ಯೋಜನೆಯಡಿ ಇರುವ ಅವಕಾಶವನ್ನು ರೈತರು ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಇದರಿಂದ ಸ್ವಂತ ಹೊಲದಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ಕೊಡುವ ಜತೆಗೆ ಕೂಲಿ ಅರಸಿ ವಲಸೆ ಹೋಗುವ ಪದ್ಧತಿಗೆ ಕಡಿವಾಣ ಹಾಕಿದಂತಾಗಿದ್ದಲ್ಲದೆ, ಬೇರೆಯವರ ಹತ್ತಿರ ಸಾಲಕ್ಕೆ ಕೈಚಾಚುವ ನಡೆಗೂ ಬ್ರೇಕ್ ಹಾಕಿದಂತಾಗಿದೆ.
*ಯೋಜನೆ ಮಾನದಂಡವೇನು?: ಈ ಹಿಂದೆ ಕೆರೆ, ಕಟ್ಟೆ ಹೂಳೆತ್ತುವ ಕೆಲಸ, ಜಮೀನು ಅಭಿವೃದ್ಧಿ, ಕುರಿಶೆಡ್, ಈರುಳ್ಳಿ ದಾಸ್ತಾನು ಘಟಕ, ನಮ್ಮ ಹೊಲ, ನಮ್ಮ ದಾರಿ ಹಾಗೂ ವಸತಿ ಭಾಗ್ಯ ಹೀಗೆ ಹಲವು ರೀತಿಯಲ್ಲಿ ರೈತರ ಕೃಷಿ ಬದುಕನ್ನ ಹಸನುಗೊಳಿಸಲೆಂದು ಯೋಜನೆಗೆ ಆದ್ಯತೆ ಕೊಡಲಾಗಿತ್ತು. ಕಾಲಕ್ರಮೇಣ ತೋಟಗಾರಿಕೆ ಬೆಳೆಗಳಿಗೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
*ವರ್ಷಕ್ಕೆ ಕೊಡುವ ಅನುದಾನವೆಷ್ಟು?: ಒಬ್ಬ ರೈತ ಜೀವನದಲ್ಲಿ ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಪಡೆಯುವ ಅನುದಾನ 2.50 ಲಕ್ಷ ರೂ. ಗೆ ಮಾತ್ರ ಅವಕಾಶ ಇದೆ. ಅದರನ್ವಯ ಒಂದು ಎಕರೆಯಲ್ಲಿ ಆರೈಕೆ ಮಾಡಲು ವರ್ಷಕ್ಕೆ ಕೂಲಿ ವೆಚ್ಚ ಹಾಗೂ ಸಾಮಗ್ರಿ ಖರೀದಿ ಎಂದು 2023-24ನೇ ಸಾಲಿನಲ್ಲಿ ನಿಗದಿ ಪಡಿಸಿರುವಂತೆ ಆಯ್ದ ಬೆಳೆಗಳಾದ ಮಾವು-ಸಪೋಟ ಬೆಳೆಗೆ ಎಕರೆಗೆ ರೂ 22.646, ದಾಳಿಂಬೆಗೆ- ರೂ. 27.618, ಪೇರಲ- ರೂ. 52.409, ಪಪ್ಪಾಯಿ- ರೂ. 47.076, ಬಾಳೆ-ರೂ 66.942, ತೆಂಗು- ರೂ 26.323, ನಿಂಬೆ/ ಮೋಸಂಬಿ-ರೂ 19.747, ಹುಣಸೆ- ರೂ 46.587, ಸೀತಾಫಲ- ರೂ 23.200, ಅಂಜೂರ-ರೂ 34.837, ನೇರಳೆ- ರೂ 21.649 ರೂ. ಇದೆ.
ಕೈಕಟ್ಟಿ ಕೂರುವುದಕ್ಕಿಂತ ಸರ್ಕಾರದ ಅನೇಕ ಸೌಲಭ್ಯಗಳನ್ನು ಅರಿತು ಸದ್ಬಳಕೆ ಮಾಡಿಕೊಂಡರೆ ಕೃಷಿಯಲ್ಲಿ ಸಾಧನೆ ಜತೆಗೆ ಕೈತುಂಬಾ ಆದಾಯ ಗಳಿಸಬಹುದು. ತೋಟಗಾರಿಕೆ ಬೆಳೆಯತ್ತ ರೈತರು ಹೆಚ್ಚು ಒಲವು ತೋರಿದರೆ ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯ.
ವಿರೂಪಾಕ್ಷಪ್ಪ, ಹಿಸ ನಿರ್ದೇಶಕ, ತೋಟಗಾರಿಕೆ ಇಲಾಖೆ
ಮಳೆಯ ಕಣ್ಣಾಮುಚ್ಚಾಲೆ ಅಟದ ನಡುವೆ ಜೀವನ ನಿರ್ವಹಣೆ ಸರಿದೂಗಿಸಲು ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡು ಒಂದು ಎಕರೆ ಬಾಳೆ ತೋಟ ಕಟ್ಟಲಾಗಿದೆ. ಸಸಿಗಳ ಖರೀದಿ, ಗುಂಡಿ ತೆಗೆದ ಬಾಬ್ತು, ಗೊಬ್ಬರ ಹಾಕಿದ ಬಂಡವಾಳದಲ್ಲಿ 66,942 ರೂ. ಖಾತೆಗೆ ಜಮೆ ಆಗಿದೆ.
ರಾಮ ಲಕ್ಷ್ಮಮ್ಮ, ವಿಠಲಾಪುರ