ತೋಟಗಳಲ್ಲೇ ಮಾಗುತ್ತಿದೆ ಮಾವು

23-klr-5
Published on

ಕೋಲಾರ: ಕರೊನಾದಿಂದಾಗಿ ಮಾವು ಬೆಳೆಗಾರರ ಸಂಕಟ ಕೇಳುವವರೇ ಇಲ್ಲದಂತಾಗಿದೆ. ಈ ಬಾರಿ ಲಾಕ್‌ಡೌನ್ ಕಠಿಣವಾಗಿರುವುದರಿಂದ ತೋಟಕ್ಕೆ ಹೋಗಿ ಮಾವು ವಿಲೇವಾರಿ ಮಾಡಲು ಸಾಧ್ಯವಾಗದೆ ಮನೆಗಳಲ್ಲೇ ಲಾಕ್ ಆಗಿರುವುದರಿಂದ ಭಾರಿ ನಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.

ಕೋಲಾರ ಜಿಲ್ಲೆಯೊಂದರಲ್ಲೇ ಅಂದಾಜು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಮೇ 1ರಿಂದಲೇ ಮಾವನ್ನು ಮಾರುಕಟ್ಟೆಗೆ ಸಾಗಿಸಬೇಕಿತ್ತು. ಆದರೆ ರೈತರು ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಮಾವು ವಿಲೇವಾರಿಗೆ ಮೇನಿಂದ ಜೂನ್‌ವರೆಗೆ ಪ್ರಾಶಸ್ತ್ಯವಾದ ಅವಧಿ, ಪ್ರಕೃತಿ ವಿಕೋಪ, ರೋಗ-ರುಜಿನವಿಲ್ಲದಿದ್ದರೆ ಈ ತಿಂಗಳಲ್ಲಿ ಹೆಚ್ಚಿನ ಲಾಭವಿಲ್ಲದಿದ್ದರೂ ಕೈ ಸುಟ್ಟುಕೊಳ್ಳದೆ ನೆಮ್ಮದಿಯಿಂದ ಇರಬಹುದು. ಆದರೆ ಕಳೆದ 2 ವರ್ಷದಲ್ಲಿ ಕರೊನಾ ಮಹಾಮಾರಿ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡುತ್ತಿದೆ.

ಕಳೆದ ವರ್ಷ ಜಿಲ್ಲೆಯ ಅನೇಕ ರೈತರು ಬಾದಾಮಿ, ಮಲ್ಲಿಕಾ ಇನ್ನಿತರ ತಳಿ ಮಾವನ್ನು ಲಾಕ್‌ಡೌನ್ ನಡುವೆಯೂ ಬೆಂಗಳೂರಿಗೆ ಕೊಂಡೊಯ್ದು ಅಲ್ಲಿನ ಪ್ರಮುಖ ಬಡಾವಣೆಗಳಲ್ಲಿ ಕೆಜಿಗೆ 130 ರೂ.ನಂತೆ ಮಾರಿದ್ದರು. ಈ ಬಾರಿಯ ಲಾಕ್‌ಡೌನ್ ಮಾವು ಬೆಳೆಗಾರರ ನಿದ್ರೆಗೆ ಭಂಗ ಉಂಟುಮಾಡಿದೆ, ತೋಟಗಳಿಗೆ ಹೊರ ಜಿಲ್ಲೆ, ರಾಜ್ಯಗಳಿಂದ ಖರೀದಿದಾರರು ಬರದಂತಾಗಿದೆ, ಇಲ್ಲಿಂದ ಸಾಗಿಸಲು ಸಾರಿಗೆ ವ್ಯವಸ್ಥೆ ಇಲ್ಲ, ಜತೆಗೆ ಸ್ಥಳೀಯರೂ ಮಾವು ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಸರ್ಕಾರ ಹಣ್ಣು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ರೂ. ನಿಗದಿ ಮಾಡಿದೆ, ಪರಿಹಾರ ಎಷ್ಟು ಹೆಕ್ಟೇರ್‌ಗೆ ಮಿತಿಗೊಳಿಸಲಾಗಿದೆ ಎಂಬ ಮಾಹಿತಿ ರೈತರಿಗೆ ತಲುಪಿಲ್ಲ, ಒಬ್ಬ ಸಣ್ಣ ರೈತ ಯಾವುದೇ ಅಡ್ಡಪರಿಣಾಮ ಇಲ್ಲದಿದ್ದರೆ 1 ಎಕರೆಗೆ 2ರಿಂದ 5 ಟನ್ ಮಾವು ಬೆಳೆಯಬಹುದು, ಇದಕ್ಕಾಗಿ ಕನಿಷ್ಠ 30 ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ, ಫಸಲು ಬಂದ ಮೇಲೆ ಕಾಯಿ ಕೀಳಲು, ಮಾರುಕಟ್ಟೆಗೆ ಸಾಗಣೆ ಮಾಡಲು ಪ್ರತ್ಯೇಕವಾಗಿ ಹಣ ಭರಿಸಬೇಕು.

ಇನ್ನು 2ರಿಂದ 25 ಎಕರೆಯಲ್ಲಿ ಮಾವು ಬೆಳೆಯುವವರಿಗೆ ಆಗುವ ಖರ್ಚು ಲಕ್ಷ ದಾಟುತ್ತದೆ, ಮೇ 25ರ ನಂತರ ಲಾಕ್‌ಡೌನ್ ಸಡಿಲಿಕೆಯಾದರೆ ಬೆಳೆಗಾರ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡಬಹುದು. ಹಾಕಿರುವ ಬಂಡವಾಳ ಪೂರ್ತಿ ಪಡೆಯಲಾಗದಿದ್ದರೂ ತಕ್ಕಮಟ್ಟಿಗೆ ಅನುಕೂಲವಾಗಬಹುದು. ಒಂದು ವೇಳೆ ಲಾಕ್‌ಡೌನ್ ಮುಂದುವರಿಕೆ ಅನಿವಾರ್ಯವಾದಲ್ಲಿ ಮಾವು ಬೆಳೆಗಾರರಿಗೆ ಪ್ರತ್ಯೇಕ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ, ನಷ್ಟದಿಂದ ಪಾರು ಮಾಡಬೇಕೆಂಬ ಒತ್ತಾಯ ರೈತರದ್ದಾಗಿದೆ.

ಕಳೆದ ವರ್ಷ ಕರೊನಾ ನಡುವೆ ಮಾವಿಗೆ ಒಳ್ಳೆಯ ದರ ಸಿಕ್ಕಿತ್ತು, ಬೆಂಗಳೂರಿನಲ್ಲಿ ದಿನಕ್ಕೆ 10ರಿಂದ 15 ಟನ್ ಮಾವು ಮಾರಾಟ ಮಾಡಿದ್ದೆ, ಈ ಬಾರಿ ಕನಿಷ್ಠ 1 ಕೆಜಿ ಮಾರಲೂ ಸಾಧ್ಯವಾಗಿಲ್ಲ. ತೋಟ ಏನಾಗಿದೆಯೋ ದೇವರೇ ಬಲ್ಲ, ಮೇ 25ರಿಂದ ಜೂನ್ 30ರವರೆಗೆ ಮಾರಾಟಕ್ಕೆ ಅವಕಾಶ ಸಿಕ್ಕಿದರೆ ನಷ್ಟದಿಂದ ಪಾರಾಗುತ್ತೇನೆ. ಅಶೋಕ ರಾಂಪುರ, ಪ್ರಗತಿಪರ ರೈತ, ಕೋಲಾರ ಮಾವು ಮಂಡಳಿಗೆ ಸರ್ಕಾರ ನೀಡುವ 50 ಲಕ್ಷ ರೂ. ಅನುದಾನದಲ್ಲಿ ಮಂಡಳಿ ಕಚೇರಿಗೆ ಪ್ರತಿವರ್ಷ 25 ಲಕ್ಷ ರೂ. ಬಾಡಿಗೆಗೆ ಭರಿಸಲಾಗುತ್ತಿದೆ, ಆಡಳಿತಾತ್ಮಕ ವೆಚ್ಚ ಬೇರೆ, ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ, ಮಂಡಳಿ ಸರ್ಕಾರದ ಮೇಲೆ ಒತ್ತಡ ತಂದು ಮಾವು ಬೆಳೆಗೆ ಪ್ರತಿ ಟನ್‌ಗೆ 10 ಸಾವಿರ ಇಲ್ಲವೇ 1 ಎಕರೆಗೆ 50 ಸಾವಿರ ರೂ. ಪರಿಹಾರ ಕೊಡಿಸಿದರೆ ಮಾತ್ರ ರೈತನಿಗೆ ಒಳ್ಳೆಯದಾಗುತ್ತದೆ, ಸರ್ಕಾರ ಮಾವು ಬೆಳೆಗಾರರನ್ನು ನಿರ್ಲಕ್ಷಿಸುವುದು ಸರಿಯಲ್ಲ. ನೀಲಟೂರು ಚಿನ್ನಪ್ಪರೆಡ್ಡಿ, ಅಧ್ಯಕ್ಷ, ಮಾವು ಬೆಳೆಗಾರರ ಸಂಘ, ಶ್ರೀನಿವಾಸಪುರ ಹತ್ತಾರು ವರ್ಷಗಳಿಂದ ತೋಟಕ್ಕೆ ಬರುವ ಖರೀದಿದಾರರಿಗೆ ಮಾವು ಮಾರಾಟ ಮಾಡುತ್ತಿರುವೆ, ಕಳೆದ ವರ್ಷವೂ ಖರೀದಿದಾರರು ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ, ಈ ಬಾರಿ ಲಾಕ್‌ಡೌನ್ ಕಠಿಣವಾಗಿರುವುದರಿಂದ ಸ್ಥಳೀಯರೂ ಸಹ ತೋಟಕ್ಕೆ ಬರದಂತಾಗಿದೆ, ಸರ್ಕಾರ ಮಾವು ಬೆಳೆಗಾರರ ನೆರವಿಗೆ ಧಾವಿಸಬೇಕು. ನೆಲಮನಹಳ್ಳಿ ಚಂದ್ರಶೇಖರ್, ಪ್ರಗತಿಪರ ರೈತ, ಕೋಲಾರ ಹೂವು-ಹಣ್ಣು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ರೂ. ಪರಿಹಾರ ನಿಗದಿ ಮಾಡಲಾಗಿದೆ. ಮಾವು ಬೆಳೆಗಾರರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಆಗಿಲ್ಲ, ಮೇ 24ರಂದು ತೋಟಗಾರಿಕೆ ಸಚಿವರನ್ನು ಭೇಟಿಯಾಗಲು ಅವಕಾಶ ಕೋರಲಾಗಿದೆ, ಸಚಿವರು ಲಭ್ಯವಾದರೆ ಮಾವು ಬೆಳೆಗಾರರಿಗೆ ಎಕರೆಗೆ ಕನಿಷ್ಠ 10 ಸಾವಿರ ರೂ. ಪರಿಹಾರ ಕೊಡಿಸಲು ಮನವಿ ಮಾಡುವೆ, ಮಾವು ಮಂಡಳಿಗೆ ಸರ್ಕಾರದಿಂದ ಸಿಗುವ ಅನುದಾನ ಕಡಿಮೆಯಾದ್ದರಿಂದ ರೈತರಿಗೆ ಸಹಾಯ ಮಾಡಲು ಆಗುತ್ತಿಲ್ಲ. ಕೆ.ವಿ.ನಾಗರಾಜ, ಅಧ್ಯಕ್ಷ, ಮಾವು ಅಭಿವೃದ್ಧಿ ಮಂಡಳಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net