

ಬಾಳೆಹೊನ್ನೂರು: ಹುಯಿಗೆರೆ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಕಾಡಾನೆ ಹಾವಳಿ ಮುಂದುವರಿದಿದ್ದು ಮಣಬೂರು ಗ್ರಾಮದಲ್ಲಿ ಬುಧವಾರ ರಾತ್ರಿ ಹಲವು ತೋಟಗಳಿಗೆ ಕಾಡಾನೆ ಲಗ್ಗೆಯಿಟ್ಟಿದೆ.
ಹಲವಾರು ತಿಂಗಳುಗಳಿಂದ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಕಾಡಾನೆಗಳು ಕಂಡುಬರುತ್ತಿದ್ದು ಇತ್ತೀಚೆಗಷ್ಟೆ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಅಂಡವಾನೆಯ ಸುಬ್ಬೇಗೌಡ ಎಂಬುವವರನ್ನು ತುಳಿದು ಸಾಯಿಸಿತ್ತು. ಬಳಿಕ ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದು ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡಲಾಗಿತ್ತು.
ಒಂದು ಆನೆ ಸ್ಥಳಾಂತರವಾದರೂ ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ಕಾಡಾನೆಗಳು ತಿರುಗಾಡುತ್ತಿದ್ದು, ರಾತ್ರಿ ವೇಳೆಗೆ ರೈತರ ಜಮೀನಿಗೆ ಲಗ್ಗೆಯಿಡುತ್ತಿವೆ. ಬುಧವಾರ ರಾತ್ರಿ ಮಣಬೂರು ಗ್ರಾಮದ ಹಲವು ರೈತರ ತೋಟ, ಗದ್ದೆಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆ ಅಡಕೆ, ಬಾಳೆ, ಕಾಫಿಗಿಡಗಳನ್ನು ತುಳಿದು ನಾಶ ಮಾಡಿದೆ. ಇದರೊಂದಿಗೆ ಇತ್ತೀಚೆಗೆ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿಯೂ ತಿರುಗಾಡಿ ಹಾಳು ಮಾಡಿದೆ.