

ವಿಜಯವಾಣಿ ಸುದ್ದಿಜಾಲ ಗದಗ
ಎಲ್ಲ ಧರ್ಮಗಳನ್ನು ಪ್ರೀತಿಸುವ ವಿಶಾಲ-ವಿಶೇಷ ಗುಣವನ್ನು ಹೊಂದಿದ್ದ ಲಿಂ.ಸಿದ್ಧಲಿಂಗ ಗುರುಗಳು ತೋಂಟದಾರ್ಯಮಠವನ್ನು ಸರ್ವ ಜನಾಂಗಗಳ ಶಾಂತಿಯ ತೋಟವನ್ನಾಗಿಸಿದ್ದರು ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಸೋಮವಾರ 2610ನೇ ಶಿವಾನುಭವದಲ್ಲಿ ಲಿಂ.ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸೌಹಾರ್ದ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂವಿಧಾನವು ಎಲ್ಲ ಧರ್ಮಗಳನ್ನು ಗೌರವಿಸಲು ಕಲಿಸಿದ್ದು, ಭಾರತ ವೈವಿಧ್ಯತೆಯಲ್ಲಿ ಸಮತೆ ಸಾಧಿಸಿರುವ ರಾಷ್ಟ್ರವಾಗಿದೆ. ಒಂದೇ ರಾಷ್ಟ್ರ ಒಂದೇ ಧರ್ಮ ಎನ್ನುವ ಸಂಪ್ರದಾಯವಾದಿ ನಿಲುವುಗಳಿಗೆ ಹೊರತಾದ ಸಂಸ್ಕøತಿ ನಮ್ಮದಾಗಿದ್ದು, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವುದು ಇಂದಿನ ದಿನಮಾನದ ಅವಶ್ಯಕತೆಯಾಗಿದೆ ಎಂದರು.
ಲಿಂಗೈಕ್ಯ ಗುರುಗಳು ಭಾವೈಕ್ಯತೆ ಮೂಡಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರ್ಕಾರ ಕೋಮು ಸೌಹಾರ್ದತಾ ಪ್ರಶಸ್ತಿ ನೀಡಿ ಗೌರವಿಸಿದ್ದು, ಯಾವುದೇ ಧರ್ಮದಲ್ಲಿರುವ ಒಳ್ಳೆಯ ಮೌಲ್ಯವನ್ನು ಗುರುತಿಸಿ ಅಳವಡಿಸಿಕೊಳ್ಳಬೇಕೆಂಬುದು ಅವರ ಆಶಯವಾಗಿತ್ತು. ಯಾವುದೇ ಧರ್ಮಗಳು ಶತ್ರುತ್ವವನ್ನು ಕಲಿಸುವುದಿಲ್ಲ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದ್ದು, ಅವುಗಳ ಕುರಿತು ಖುದ್ದು ಅಧ್ಯಯನ ಮಾಡಿ ನಿರ್ಧಾರಕ್ಕೆ ಬರಬೇಕು ವಿನ: ಸಾಮೂಹಿಕ ಅಭಿಪ್ರಾಯಗಳನ್ನೇ ನಂಬಬಾರದು ಎಂದರು.
ಪ್ರವಾದಿ ಮಹಮ್ಮದ್ ಅರಿಯೋಣ ಬನ್ನಿ, ವಿವಾಹಗಳು ಮತ್ತು ವಿಮರ್ಶೆಗಳು ಗ್ರಂಥಗಳು ಲೋಕಾರ್ಪಣೆಗೊಳಿಸಲಾಯಿತು.ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ ಕುಂಞ ಮಾತನಾಡಿ, ಇಂದಿನ ದಿನಗಳಲ್ಲಿ ಮಹಾಪುರುಷರನ್ನು ಒಂದು ವರ್ಗಕ್ಕೆ ಸೇರಿಸುವ ಸಂಕುಚಿತ ಮನೋಭಾವ ಬೆಳೆಯುತ್ತಿರುವುದು ಶೋಚನೀಯವಾಗಿದ್ದು, ಮಹಾಪುರುಷರು ಮಾನವಕುಲದ ಸಂಪತ್ತು ಎನ್ನುವುದನ್ನು ನಾವು ಮರೆಯಬಾರದು ಎಂದರು.
ಪ್ರವಾದಿ ಮಹಮ್ಮದರ ಬೋಧನೆಗಳು ಇಡೀ ಮಾನವಕುಲಕ್ಕೆ ಬೆಳಕು ತೋರುವ ಸಂದೇಶಗಳಾಗಿದ್ದು, ಶೋಷಣೆ ಇಲ್ಲದ ದುಶ್ಚಟಗಳಿಲ್ಲದ, ರಕ್ತಪಾತವಿಲ್ಲದ ಸಮಾಜದ ಕನಸು ಪ್ರವಾದಿಯವರದ್ದಾಗಿತ್ತು ಎಂದರು.
ಫಾದರ್ ರಾಜಪ್ಪ, ಫಾದರ್ ಜಾಕೋಬ್ ಅಂಥೋನಿ ಹಾಗೂ ಡಾ.ಅಪ್ಪಣ್ಣ ಹಂಜೆ ಉಪನ್ಯಾಸ ನೀಡಿದರು.ಕಸ್ತೂರಿ ತೊಂಡಿಹಾಳ ಧರ್ಮಗ್ರಂಥ ಪಠಿಸಿದರು. ಇಂದಿರಾ ಆಸಂಗಿ ವಚನ ಚಿಂತನಗೈದರು. ಬೆಂಗಳೂರಿನ ಡಾ.ಸರೋಜಿನಿ ಶಿಂತ್ರಿ ದಾಸೋಹ ಸೇವೆ ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಪದಾ„ಕಾರಿಗಳಾದ ಮುರುಗೇಶ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಸೋಮು ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವಬಸಪ್ಪ ಯಂಡಿಗೇರಿ, ಶಿವಾನುಭವ ಸಮಿತಿ ಚೇರ್ಮನ್ ವಿವೇಕಾನಂದಗೌಡ ಪಾಟೀಲ ಮತ್ತಿತರರು ಇದ್ದರು.