ತೋಳನ ಕೆರೆ ಬಳಿ ಮಿಯವಾಕಿ ಅರಣ್ಯ

h14-Forest 2
Published on

ಸಂತೋಷ ವೈದ್ಯ ಹುಬ್ಬಳ್ಳಿ

ಶುದ್ಧ ಆಕ್ಸಿಜನ್​ಗಾಗಿ (ಆಮ್ಲಜನಕ) ಹೆಚ್ಚೆಚ್ಚು ಗಿಡಗಳನ್ನು ಬೆಳೆಸಬೇಕೆಂಬುದು ಕರೊನಾ ಸಂಕಷ್ಟದ ಕಾಲದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ. ಇದೇ ನಿಟ್ಟಿನಲ್ಲಿ ಯೋಚಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅವಳಿ ನಗರದ ಐದು ಕಡೆಗಳಲ್ಲಿ ದಟ್ಟವಾದ ಅರಣ್ಯ ಸೃಷ್ಟಿಗೆ ಮುಂದಾಗಿದ್ದು, ತೋಳನಕೆರೆ ಪ್ರದೇಶದಲ್ಲಿ ಈಗಾಗಲೇ ಕೆಲಸ ಆರಂಭಿಸಿದೆ.

ಖಾಲಿ ಜಾಗದಲ್ಲಿ ಗಿಡಗಳನ್ನು ನೆಡುವ ವನಮಹೋತ್ಸವ ಅಥವಾ ಹಸೀರುಕರಣದಂಥ ಕಾರ್ಯಕ್ರಮ ಇದಲ್ಲ. ಜಪಾನ್ ದೇಶದ ಸಸ್ಯ ತಜ್ಞ ಡಾ. ಅಕಿರಾ ಮಿಯವಾಕಿ ಅಭಿವೃದ್ಧಿಪಡಿಸಿರುವ ‘ಮಿಯವಾಕಿ ಅರಣ್ಯ’ ಮಾದರಿಯಲ್ಲಿ ಸ್ಥಳೀಯ ಸಸ್ಯ ಸಂಕುಲಗಳನ್ನು ಬೆಳೆಸಿ ನಗರ ಅರಣ್ಯೀಕರಣಗೊಳಿಸುವ ಪ್ರಯತ್ನ ಇದಾಗಿದೆ. ಇದನ್ನು ಅರ್ಬನ್ ಫಾರೆಸ್ಟ್ರಿ ಯೋಜನೆ ಎಂದು ಹೆಸರಿಸಲಾಗಿದೆ. ಅವಳಿ ನಗರದಲ್ಲಿ ವಿವಿಧೆಡೆ ಪರಿಸರಕ್ಕೆ ವಿರೋಧಿಯಾದ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಹಾಗೂ ಬಿಆರ್​ಟಿಎಸ್ (ತ್ವರಿತ ಬಸ್ ಸಂಚಾರ ವ್ಯವಸ್ಥೆ) ಯೋಜನೆಗಾಗಿ ಸಸ್ಯ ಸಂಪತ್ತು ಕಳೆದುಕೊಂಡ ಬಳಿಕ ಆಡಳಿತ ಯಂತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.

ಹುಬ್ಬಳ್ಳಿಯಲ್ಲಿ ತೋಳನಕರೆ ಸಮೀಪ ಮತ್ತು ನೃಪತುಂಗ ಬೆಟ್ಟದ ಪಿರಾಮಿಡ್ ಬಳಿ ಪಾಲಿಕೆಯು ಅರಣ್ಯ ಸೃಷ್ಟಿಸಲು ಜಾಗ ಗುರುತಿಸಿದೆ. ಧಾರವಾಡದಲ್ಲಿ 3 ಕಡೆ ಇದೇ ಉದ್ದೇಶಕ್ಕಾಗಿ ಜಾಗ ಹುಡುಕಾಟ ನಡೆಯುತ್ತಿದೆ. ತೋಳನಕೆರೆ ಸಮೀಪದ ಪಾಲಿಕೆ ಒಡೆತನದ 2.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಈಗಾಗಲೇ ಸಾಕಷ್ಟು ತಯಾರಿ ನಡೆಸಲಾಗಿದೆ. ಇದು ಪಾಲಿಕೆ ಒಡೆತನದ ಜಾಗ. ಖಾಲಿ ಜಾಗದಲ್ಲಿ ಕಸ-ಕಡ್ಡಿ, ಕಟ್ಟಡದ ಅವಶೇಷಗಳು ರಾಶಿ ಬಿದ್ದಿದ್ದವು. ಅವನ್ನೆಲ್ಲ ಸ್ವಚ್ಛಗೊಳಿಸಿ ಗ್ರಿಲ್ ಫೆನ್ಸಿಂಗ್ ಮಾಡಲಾಗಿದೆ. ಇಲ್ಲಿಯ ಕಾಮಗಾರಿಗಾಗಿ ಈಗಾಗಲೇ ಡಿಪಿಆರ್ (ವಿಸõತ ಯೋಜನಾ ವರದಿ) ರೆಡಿಯಾಗಿದೆ.

30 ಪಟ್ಟು ಹೆಚ್ಚು ದಟ್ಟ: ತೋಳನಕೆರೆ ಸಮೀಪದ ಒಟ್ಟು 2.5 ಎಕರೆ ಪ್ರದೇಶದಲ್ಲಿ ತಲಾ ಅರ್ಧ ಎಕರೆಯಂತೆ ದಟ್ಟ ಕಾಡು, ಟ್ರೀ ಪಾರ್ಕ್, ಔಷಧೀಯ ಗಿಡಮೂಲಿಕೆಗಳು, ತೆರೆದ ಜಾಗ ಹಾಗೂ ಮಕ್ಕಳ ಆಟೋಟಕ್ಕೆ ಜಾಗವನ್ನು ಮೀಸಲಿಡಲಾಗಿದೆ. ಮಿಯವಾಕಿ ಅರಣ್ಯವು ಸಾಂಪ್ರದಾಯಿಕ ಅರಣ್ಯಗಳಿಗಿಂತ 30 ಪಟ್ಟು ಹೆಚ್ಚು ದಟ್ಟವಾಗಿರಲಿದೆ. ಇಲ್ಲಿ ಸುಮಾರು 100 ರಷ್ಟು ವಿವಿಧ ಜಾತಿ ಸಸ್ಯಗಳನ್ನು ನೆಡಲಾಗುತ್ತಿದೆ. ಗಿಡಮೂಲಿಕೆ ಸಸ್ಯಗಳಿಗೆ ಸ್ಥಳೀಯ ಮತ್ತು ವೈಜ್ಞಾನಿಕ ಹೆಸರು ಸೂಚಿಸುವ ನಾಮಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅವು ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಶೈಕ್ಷಣಿಕವಾಗಿಯೂ ಸಹಕಾರಿಯಾಗಲಿವೆ. ಇಂಥ ಒಂದು ಪ್ರಯತ್ನದಿಂದ ವಿವಿಧ ಪಕ್ಷಿ, ಕೀಟ, ಪ್ರಾಣಿ ಹಾಗೂ ಸಸ್ಯ ಪ್ರಭೇದಗಳಿಗೆ ಆಸರೆಯಾಗಲಿವೆ ಹಾಗೂ ಮಾನವ ಮತ್ತು ಪ್ರಕೃತಿಯ ಸಂಬಂಧ ಹೆಚ್ಚಲಿದೆ ಎಂದು ಆಶಿಸಲಾಗಿದೆ.

ಮಿಯವಾಕಿ ಅರಣ್ಯ, ಗಿಡಮೂಲಿಕೆಗಳ ಪ್ಲಾಂಟೇಶನ್ ಹಾಗೂ ಟ್ರೀ ಪಾರ್ಕ್ ನಿರ್ವಿುಸಿ 1 ವರ್ಷದ ಅವಧಿಗೆ ನಿರ್ವಹಣೆಯ ಜವಾಬ್ದಾರಿಯನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಹಿಸಿಕೊಂಡಿದೆ. ನೃಪತುಂಗ ಬೆಟ್ಟದಲ್ಲಿ ಯಂಗ್ ಇಂಡಿಯನ್ಸ್ ಸಂಘಟನೆಯ ಡಾ. ನಾಗರಾಜ ನಾಯ್ಕ ಹಾಗೂ ಧಾರವಾಡದಲ್ಲಿ ನೇಚರ್ ಫಸ್ಟ್ ಸಂಘಟನೆಯ ಬಿ.ವಿ. ಹಿರೇಮಠ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಇದು ಸ್ಥಳೀಯರ ಸಹಭಾಗಿತ್ವವನ್ನು ಸೂಚಿಸುತ್ತದೆ.

ಪಾಲಿಕೆಯಿಂದ ರೂ. 2 ಕೋಟಿ ವೆಚ್ಚ: ಹುಬ್ಬಳ್ಳಿಯ ತೋಳನಕೆರೆ ಸಮೀಪ ಸೃಷ್ಟಿಸುತ್ತಿರುವ ಅರಣ್ಯ ಪ್ರದೇಶದಲ್ಲಿ ಹಲವು ಸೌಲಭ್ಯ ಕಲ್ಪಿಸಲು ಪಾಲಿಕೆಯು 1.98 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಈಗಾಗಲೇ ಪಾಲಿಕೆಯ 15ನೇ ಹಣಕಾಸು ಯೋಜನೆ ಹಾಗೂ ಸಾಮಾನ್ಯ ನಿಧಿಯಡಿ 68 ಲಕ್ಷ ರೂ. ಗಳಲ್ಲಿ ಈಗಾಗಲೇ ಸುತ್ತಲೂ 1 ಅಡಿಯಷ್ಟು ಕಾಂಪೌಂಡ್ ಗೋಡೆ ನಿರ್ವಿುಸಿ ಅದರ ಮೇಲೆ ಸುಮಾರು 8 ಅಡಿಯಷ್ಟು ಎತ್ತರದ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ವಾಕಿಂಗ್ ಪಾಥ್, ಕೊಳವೆ ಬಾವಿ, ಬೀದಿ ದೀಪ ಹಾಗೂ ಇನ್ನಿತರ ಮೂಲಸೌಕರ್ಯಗಳಿಗೆ ಪಾಲಿಕೆಯು ಇನ್ನೂ 1.30 ಕೋಟಿ ರೂ. ಖರ್ಚು ಮಾಡಲಿದೆ. ಇದಲ್ಲದೆ, ಪ್ಲಾಂಟೇಶನ್ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿರುವ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ 50-60 ಲಕ್ಷ ರೂ. ಖರ್ಚು ಮಾಡಲು ಮುಂದೆ ಬಂದಿದೆ.

ಅವಳಿ ನಗರದಲ್ಲಿ ಹಸಿರು ವಲಯ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಪಾಲಿಕೆಯದ್ದಾಗಿದೆ. ನಗರ ಅರಣ್ಯೀಕರಣ (ಅರ್ಬನ್ ಫಾರೆಸ್ಟ್ರಿ) ಯೋಜನೆಯು ನಗರ ಪ್ರದೇಶದ ಜನರಿಗೆ ಕಾಡಿನ ರೀತಿಯ ವಾತಾವರಣ ಸೃಷ್ಟಿಸುವ ಪ್ರಯತ್ನವಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇದನ್ನು ಸಾಕಾರಗೊಳಿಸಲಾಗುತ್ತಿದೆ.-ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net