ತೋಟಕ್ಕೆ ಬೆಂಕಿ

h06-Lxr4 tota
Published on

ಲಕ್ಷ್ಮೇಶ್ವರ: ನಿಂಬೆ, ಚಿಕ್ಕು, ಮಾವು, ತೆಂಗು, ತೇಗ ಬೆಳೆದಿದ್ದ ತೋಟಕ್ಕೆ ಬಿದ್ದ ಆಕಸ್ಮಿಕ ಬೆಂಕಿಯಿಂದ ಲಕ್ಷ್ಮಾಂತರ ರೂ. ನಷ್ಟ ಸಂಭವಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಮರೇಶ ಪಿಳ್ಳಿ ಅವರಿಗೆ ಸೇರಿದ ಸುಮಾರು 4 ಎಕರೆ ತೋಟದಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ತಗುಲಿದ್ದು, ಅದು ವೇಗವಾಗಿ ತೋಟವನ್ನು ಆಕ್ರಮಿಸಿಕೊಂಡಿದೆ. ಬೆಂಕಿ ತಗುಲಿರುವದನ್ನು ಕಂಡ ಸುತ್ತಮುತ್ತಲಿನ ಜನರು ತಮ್ಮ ಮನೆಯಲ್ಲಿನ ನೀರು ತಂದು ಹಾಕಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೆ, ಬೆಂಕಿ ತಹಬದಿಗೆ ಬಾರದಿದ್ದುದರಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಿಯೇ ತೋಟದಲ್ಲಿದ್ದ ನಿಂಬೆ, ಚಿಕ್ಕು, ಮಾವು, ತೆಂಗು, ತೇಗದ ನೂರಾರು ಗಿಡಗಳು ಬೆಂಕಿಗೆ ಆಹುತಿಯಾಗಿದ್ದವು. ಮೋಟಾರು, ಸ್ಪ್ರಿಂಕ್ಲರ್, ಪೈಪುಗಳು ಹಾಗೂ ಇನ್ನಿತರೆ ವಸ್ತುಗಳು ಸುಟ್ಟು ಹೋಗಿವೆ.

ಕಂದಾಯ ಇಲಾಖೆ ಅಧಿಕಾರಿ ಎಸ್.ಎಸ್.ಪಾಟೀಲ ಮತ್ತಿತರರು ಭೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಲಕ್ಷಾಂತರ ಮೌಲ್ಯದ ಹತ್ತಿ ಭಸ್ಮ

ಲಕ್ಷ್ಮೇಶ್ವರ: ಪಟ್ಟಣದ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಶಾಂತಿಲಾಲ್ ಮುಥಾ ಅವರಿಗೆ ಸೇರಿದ ಪದ್ಮಾವತಿ ಕಾಟನ್ ಇಂಡಸ್ಟ್ರೀಜ್​ನಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಲಕ್ಷಾಂತರ ಮೌಲ್ಯದ ಹತ್ತಿ ಬೇಲ್​ಗಳು, ಹತ್ತಿಕಾಳು ಸೇರಿದಂತೆ ಹಲವು ಯಂತ್ರಗಳು ಸುಟ್ಟು ಹೋಗಿರುವ ಘಟನೆ ನಡೆದಿದೆ.

ಗುರುವಾರ ರಾತ್ರಿ 12.30 ರ ಸುಮಾರಿಗೆ ಶಾರ್ಟ್​ಸರ್ಕ್ಯೂಟ್​ನಿಂದ ಆಕಸ್ಮಿಕವಾಗಿ ಹತ್ತಿಯ ಬೇಲ್​ಗಳಿಗೆ ಬೆಂಕಿ ತಗುಲಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡಿ ಫ್ಯಾಕ್ಟರಿಗೆ ವ್ಯಾಪಿಸಿದೆ. ಹತ್ತಿಯನ್ನು ಸ್ವಚ್ಛಗೊಳಿಸಿ ಅರಳೆ ಮಾಡಿ ಸಿದ್ಧಪಡಿಸಲಾಗಿದ್ದ ಬೇಲ್​ಗಳು ಬೆಂಕಿಗೆ ಭಸ್ಮವಾಗಿವೆ. ಘಟನೆಯ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ವಾಹನಗಳಲ್ಲಿ ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾದರೂ, ಅಷ್ಟರಲ್ಲಾಗಲೇ ಅಪಾರ ಪ್ರಮಾಣದ ಹತ್ತಿ ಭಸ್ಮವಾಗಿತ್ತು.

ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸಾವು

ನರಗುಂದ: ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಭವಿಸಿದೆ. ಕೊಣ್ಣೂರಿನ ಮಲ್ಲಿಕಾರ್ಜುನ ಬಡಾವಣೆ ನಿವಾಸಿ ಈರಣ್ಣ ಪರಪ್ಪ ವಾಲಿ (40) ಸಾವನ್ನಪ್ಪಿದವ. ಈತ ಶುಕ್ರವಾರ ಬೆಳಗ್ಗೆ ತಮ್ಮ ಮನೆಯಿಂದ ಕೊಣ್ಣೂರಿನ ಬಸ್ ನಿಲ್ದಾಣಕ್ಕೆ ಬರುವ ಮಾರ್ಗಮಧ್ಯೆ ಬೈಕ್ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ಮೃತನ ಸಹೋದರ ಬಶೆಟ್ಟೆಪ್ಪ ವಾಲಿ ನರಗುಂದ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net