ತೊಳಲು ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ಹಸು ಬಲಿ

23blrp2
Published on
  • ಹಾಸನ : ಬೇಲೂರು ತಾಲೂಕಿನ ತೊಳಲು ಗ್ರಾಮದಲ್ಲಿ ಚರ್ಮಗಂಟು ರೋಗಕ್ಕೆ ಹಸುವೊಂದು ಮೃತಪಟ್ಟಿದ್ದು, ಅಕ್ಕಪಕ್ಕದ ಗ್ರಾಮಗಳಲ್ಲಿನ ರೈತರ ಆತಂಕಕ್ಕೆ ಕಾರಣವಾಗಿದೆ. ತೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಅವರ ಮನೆಯ ಹಸು ರೋಗಕ್ಕೆ ತುತ್ತಾಗಿದೆ.
  • ಬೇಲೂರು ತಾಲೂಕಿನಲ್ಲಿ ಈಗಾಗಲೇ 99 ಹಸುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದು, ಸಾವಿರಾರು ರೂ. ಬೆಲೆ ಬಾಳುವ ಮತ್ತು ಪ್ರತಿನಿತ್ಯ ಹಾಲು ಕೊಡುವ ಹಸುಗಳು ಕಣ್ಣ ಮುಂದೆಯೇ ಸಾವಿಗೀಡಾಗುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ.
  • ಬಯಲು ಸೀಮೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತಿದ್ದ ಈ ರೋಗ ಇತ್ತೀಚಿನ ದಿನಗಳಲ್ಲಿ ಮಲೆನಾಡು ಪ್ರದೇಶಕ್ಕೂ ಹಬ್ಬಿ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದೆ. ಆದರೆ ಪಶುಸಂಗೋಪನ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷೃ ತಾಳಿದ್ದಾರೆ ಎಂಬುದು ರೈತರ ಆರೋಪವಾಗಿದೆ. ಇದಕ್ಕೆ ಪರಿಹಾರ ಕಂಡುಹಿಡಿಯುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ ಎಂಬುದು ತಾಲೂಕಿನ ರೈತರ ಆಗ್ರಹವಾಗಿದೆ.


  • ಬೇಲೂರು ತಾಲೂಕಿನಲ್ಲಿ ಒಟ್ಟು 66 ಸಾವಿರ ಜಾನುವಾರುಗಳಿದ್ದು, ಈ ಎಲ್ಲವಕ್ಕೂ ಚರ್ಮಗಂಟು ರೋಗಕ್ಕೆ ಸಂಬಂಧಿಸಿದಂತೆ ಲಸಿಕೆ ಹಾಕಲಾಗಿದೆ. ಆದರೆ ಈ ರೋಗಕ್ಕೆ ತುತ್ತಾಗಿ ಇಲ್ಲಿಯವರೆಗೂ 99 ಹಸುಗಳು ಮೃತಪಟ್ಟಿವೆ. ರೋಗ ಕಾಣಿಸಿಕೊಂಡಿರುವ ಹಸುಗಳಿಗೆ ಪ್ರತಿನಿತ್ಯ ಚಿಕಿತ್ಸೆ ಕೊಡಲಾಗುತ್ತಿದೆ.
    ಡಾ.ಹರ್ಷ ವೈದ್ಯಾಧಿಕಾರಿ ಪಶು ಆಸ್ಪತ್ರೆ ಬೇಲೂರು
  • ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗಕ್ಕೆ ಮುನ್ನೆಚ್ಚರಿಕೆಯಾಗಿ ಮೊದಲೇ ಕ್ರಮ ಕೈಗೊಂಡಿದ್ದರೆ ಸಾವನಪ್ಪಿರುವ ಸಾಕಷ್ಟು ಹಸುಗಳನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹಸುಗಳು ಸಾವನಪ್ಪುತ್ತಿವೆ. ಆದ್ದರಿಂದ ಅಧಿಕಾರಿಗಳು ಮತ್ತು ರೈತರು ಎಚ್ಚರಿಕೆ ವಹಿಸಿ ರೋಗಕ್ಕೆ ಚಿಕಿತ್ಸೆ ಕೊಡಿಸಲು ಮುಂದಾಗಬೇಕಿದೆ. ಪರಮೇಶ್ ರೈತ, ತೊಳಲು ಗ್ರಾಮ, ಬೇಲೂರು ತಾಲೂಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net