

ಕಿಕ್ಕೇರಿ : ಪಟ್ಟಣದಲ್ಲಿ ತೊಟ್ಟಿಲ ಗೌರಿ ಹಾಗೂ ಗಂಗಾಮಾತೆಯ ಮೆರವಣಿಗೆ ಬಲು ಸಂಭ್ರಮದಿಂದ ನೆರವೇರಿತು. ಈ ಬಾರಿ ಸೋಮವಾರ ಗೌರಿ ಗಣೇಶ ಹಬ್ಬ ಎರಡು ಒಟ್ಟಿಗೆ ನಡೆದ ಕಾರಣ ಪೂಜಾ ಸಂಭ್ರಮದಲ್ಲಿ ಯುವಕರು ಅಧಿಕವಾಗಿ ಕಂಡು ಬಂದರು.
ಬಸೆಟ್ಟಿ ನಾಗೇಂದ್ರ ಸಾಂಪ್ರದಾಯಿಕ ಪೂಜೆ ನೆರವೇರಿಸಲು ಅಮಾನಿಕೆರೆಗೆ ತೆರಳಿ ಗಂಗಾ ಸ್ನಾನ ಮಾಡಿದರು. ನಂತರ ಮೂರು ಬಾರಿ ನೀರಿನಲ್ಲಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಶುಭ್ರ ಬಟ್ಟೆಯಲ್ಲಿ ಮುಚ್ಚಿಕೊಂಡು ತಮ್ಮ ಮನೆಯಲ್ಲಿಯೇ ದೇವಿಯ ಗದ್ದುಗೆ ನಿರ್ಮಿಸಿದರು. ದಶಕಗಳಿಂದ ಬಸೆಟ್ಟಿ ನಾಗೇಂದ್ರ ಕುಟುಂಬದವರು ತರುತ್ತಿದ್ದ ಗಂಗೆ ವಸ್ತುವನ್ನು ತೊಟ್ಟಿಲಿನಲ್ಲಿ ಇಡುತ್ತಿದ್ದರು. ತದನಂತರ ಈ ದೇವಿ ಮುಡುಪು ಬಟ್ಟೆಯನ್ನು ಗಂಗಾಮತಸ್ಥರು ಗಂಗೆ ಗೌರಿಯಾಗಿ ಎರಡು ತೊಟ್ಟಿಲಿನಲ್ಲಿ ಇಟ್ಟುಕೊಂಡು ಪಟ್ಟಣದಲ್ಲಿ ಮೆರವಣಿಗೆ ಮಾಡುತ್ತಿದ್ದರು.ಕಾಯಿ ಮಂಜೇಗೌಡ, ಕೆ.ಎನ್. ನಾಗೇಗೌಡ, ಕೆ.ವಿ. ಅರುಣಕುಮಾರ್, ಕೆ.ಎನ್. ಪುಟ್ಟೇಗೌಡ, ಭಾರತಿ, ಮೀನು ಸಿದ್ದು, ರಾಜಣ್ಣ, ಕುಮಾರ ಮತ್ತಿತರರಿದ್ದರು.